ಬೆಂಗಳೂರು : ಮಂಗಗಳು ಹಾಗೂ ಕಾಡು ಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಹೆಚ್ಚಿನ ಮೊತ್ತ ನೀಡಬೇಕು ಹಾಗೂ ಮಂಕಿ ಪಾರ್ಕ್ ಸ್ಥಾಪನೆ ಮಾಡಬೇಕೆಂದು ಪಕ್ಷ ಭೇದ ಮರೆತು ಶಾಸಕರು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಮಲೆನಾಡು, ಪಶ್ಚಿಮಘಟ್ಟ, ಬಯಲು ಸೀಮೆ ಸೇರಿದಂತೆ ಮತ್ತಿತರ ಕಡೆ ಕಾಡು ಪ್ರಾಣಿಗಳು ಮತ್ತು ಮಂಗಗಳು ದಾಳಿ ನಡೆಸುವುದು ಸಾಮಾನ್ಯ. ಬಿತ್ತನೆ ಮಾಡಿದ ಬೀಜ ಹಾಗೂ ಬೆಳೆದು ನಿಂತ ಪೈರನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತಿವೆ. ಕೆಲವು ಕಡೆ ಮಾನವ ಸಂಘರ್ಷವೂ ಉಂಟಾಗಿದೆ. ಸರ್ಕಾರ ನೀಡುತ್ತಿರುವ ಪರಿಹಾರ ಏನೂ ಸಾಲದು ಎಂದು ಶಾಸಕರು ಸರ್ಕಾರದ ಗಮನ ಸೆಳೆದರು. ಸರ್ಕಾರ ತಕ್ಷಣವೇ ಬೆಳೆ ಹಾನಿ ಪರಿಹಾರವನ್ನು ಪರಿಷ್ಕರಿಸಬೇಕು. ಅಲ್ಲದೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ಪ್ರಶ್ನೋತ್ತರ ವೇಳೆ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಡಾನೆ, ಕಾಡು ಕೋಣ, ಕಾಡುಹಂದಿ ಮತ್ತು ಮಂಗಗಳ ಹಾವಳಿ ಹೆಚ್ಚಾಗಿದೆ. ಬೆಳೆ ಹಾಳಾಗಿವೆ. ಸರ್ಕಾರ ಕೊಡುತ್ತಿರುವ ಪರಿಹಾರ ಏನೇನೂ ಸಾಲದು ಎಂದರು.
ಇದಕ್ಕೆ ದನಿಗೂಡಿಸಿದ ಶಾಸಕರಾದ ಕಳಸಪ್ಪ ಬಂಡಿ, ಶ್ರೀನಿವಾಸ್‍ಗೌಡ, ಕೆ.ಜಿ. ಬೋಪಯ್ಯ, ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಅನೇಕರು, ಮೊದಲು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು ಹಾಗೂ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ನನ್ನ ಮತ ಕ್ಷೇತ್ರದಲ್ಲಿ ಕಾಡುಕೋಣದಿಂದ ಹುಡುಗಿಯೊಬ್ಬಳು ಕೈ ಮುರಿದುಕೊಂಡಿದ್ದಾಳೆ. ಅದರ ಶಸ್ತ್ರ ಚಿಕಿತ್ಸೆಗೆ 2.50 ಲಕ್ಷ ರೂ. ಗೂ ಹೆಚ್ಚು ಹಣ ಖರ್ಚಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳು ಅವರು ಕೆಲಸ ಮಾಡಲು ಆಗುವುದಿಲ್ಲ. ರಾಜ್ಯ ಸರ್ಕಾರ ಅವರಿಗೆ 35 ಸಾವಿರ ರೂ. ಪರಿಹಾರ ಕೊಡುತ್ತಿದೆ. ಇದು ಸಾಲುತ್ತದೆಯೇ ಎಂದು ಪ್ರಶ್ನಿಸಿದರು. ಸಾಗರದಲ್ಲಿ ಮಂಕಿಪಾರ್ಕ್ ನಿರ್ಮಿಸಲು ಆರು ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ, ಇದುವರೆಗೂ ಮಂಕಿ ಪಾರ್ಕ್ ನಿರ್ಮಾಣವಾಗಲಿಲ್ಲ, ನಮಗೆ ಮಂಗಗಳ ಕಾಟವೂ ತಪ್ಪಿಲ್ಲ ಎಂದು ಹೇಳಿದರು.
ಒಂದು ಎಕರೆ ಬೆಳೆ ಹಾನಿಯಾದರೆ ಅವರು ಪರಿಹಾರ ತೆಗೆದುಕೊಳ್ಳಲು ಇಲಾಖೆಯಿಂದ ಇಲಾಖೆಗೆ ಅಲೆಯಬೇಕು. ಇವರು ಕೊಡುವ ಪರಿಹಾರ ಅಷ್ಟಕಷ್ಟೆ. ಮಂಗಗಳ ಹಾವಳಿ ನಿಯಂತ್ರಿಸಲು ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುತ್ತೇವೆ ಎಂದು ಹೇಳುತ್ತೀರಿ. ನೀವು ಗಂಡು ಮಂಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದೀರೋ ಅಥವಾ ಹೆಣ್ಣು ಮಂಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದಿರೋ ಎಂದು ಪ್ರಶ್ನಿಸಿದರು. ನೀವು ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ. ಇಲ್ಲವೇ ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಕೇಳಿದರು.
ಈ ವೇಳೆ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕೇವಲ ಪಶ್ಚಿಮಘಟ್ಟ, ಮಲೆನಾಡು ಅಲ್ಲದೆ ಬಯಲು ಸೀಮೆಯಲ್ಲೂ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಜಮೀನಿನಲ್ಲಿ ಬೆಳೆ ಬಿತ್ತಿ ಬಂದರೆ ರಾತ್ರಿ ವೇಳೆಗೆ ಪ್ರಾಣಿಗಳು ಹಾಳು ಮಾಡುತ್ತವೆ. ನಮ್ಮ ಕಷ್ಟ ಯಾರಿಗೆ ಹೇಳೋಣ ಎಂದು ಅಸಮಾಧಾನ ಹೊರ ಹಾಕಿದರು. ಕೋಲಾರ ಶಾಸಕ ಶ್ರೀನಿವಾಸ್‍ಗೌಡ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಮಂಗಗಳು ಹಾಡಹಗಲೇ ಮನೆಗಳಿಗೆ ನುಗ್ಗುತ್ತಿವೆ. ಮನೆಯಲ್ಲಿ ಇರುವುದೇ ಕಷ್ಟವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕೆ.ಜಿ.ಬೋಪಯ್ಯ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಹುಲಿಗಳ ಹಾವಳಿ ವಿಪರೀತವಾಗಿದೆ. ಈಗಾಗಲೇ ಮೂರು ಮಂದಿಯನ್ನು ಕೊಂದು ಹಾಕಿದೆ. ಹುಲಿ ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಕೇಳಿದ್ದಕ್ಕೆ, ನಮ್ಮ ವಿರುದ್ಧ ಪರಿಸರವಾದಿಗಳು ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದರು.
ಜೆಡಿಎಸ್ ಸದಸ್ಯ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಒಂದು ಕಾಫಿಗಿಡ ನಷ್ಟವಾದರೆ 100-200 ರೂ. ಪರಿಹಾರ ಕೊಡಲಾಗುತ್ತದೆ. ಒಂದು ಗಿಡಕ್ಕೆ ಕನಿಷ್ಠ 10 ಸಾವಿರ ರೂ. ಬೇಕು. ಇಷ್ಟು ಕಡಿಮೆ ಮೊತ್ತದ ಪರಿಹಾರ ಕೊಟ್ಟರೆ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು. 2009ರಲ್ಲಿ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪರಿಷ್ಕರಿಸಿಲ್ಲ. ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಉತ್ತರ ನೀಡಿದ ಹಿರಿಯ ಸಚಿವ ಜಗದೀಶ್ ಶೆಟ್ಟರ್, ಕಾಡು ಪ್ರಾಣಿಗಳಿಂದ ರೈತರು ಬೆಳೆದ ಬೆಳೆ ಹಾನಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಬೆಳೆ ಹಾನಿ ಪರಿಹಾರವನ್ನು ಪರಿಷ್ಕರಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಕೆಲವು ಭಾಗಗಳಲ್ಲಿ ಹೆಚ್ಚಿನ ಪರಿಹಾರ ಕೊಡಬೇಕೆಂಬ ಬೇಡಿಕೆ ಇದೆ. ಇವೆಲ್ಲವನ್ನು ಅರಣ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.