ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ರೂ.5 ಸಾವಿರ, ಉಪಾಧ್ಯಕ್ಷರಿಗೆ ರೂ.4 ಸಾವಿರ ಮತ್ತು ಸದಸ್ಯರಿಗೆ ರೂ. 3 ಸಾವಿರಗಳನ್ನು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಪರವಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಪರಿಷತ್‍ನಲ್ಲಿ ತಿಳಿಸಿದ್ದಾರೆ.
ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ವಿಧಾನಪರಿಷತ್‍ನಲ್ಲಿ ವಿಷಯ ಪ್ರಸ್ತಾಪಿಸಿ, ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿದ್ದ ಗೌರವಧನ ತುಂಬಾ ಕಡಿಮೆ ಇರುತ್ತದೆ. ಗೌರವಧನ ಪರಿಷ್ಕರಿಸಿ 5 ವರ್ಷಗಳು ಕಳೆದಿವೆ. ಆದ್ದರಿಂದ ನೀಡುತ್ತಿರುವ ಗೌರವಧನ ಸದ್ಯ ಬೆಲೆ ಏರಿಕೆಯಿಂದಾಗಿ ಏತಕ್ಕೂ ಸಾಲದಾಗಿದೆ. ಕಾರಣ ಕೂಡಲೇ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ರೂ.5 ಸಾವಿರ, ಉಪಾಧ್ಯಕ್ಷರಿಗೆ ರೂ.4 ಸಾವಿರ ಮತ್ತು ಸದಸ್ಯರಿಗೆ ರೂ.3 ಸಾವಿರ ಗೌರವಧನವನ್ನು ಹೆಚ್ಚಿಸಲು ಕೇಳಿದರು.
ಈ ಕುರಿತು ವಿಧಾನಪರಿಷತ್‍ನಲ್ಲಿ ಇಂದು ಚರ್ಚೆ ನಡೆದಾಗ ಉಳಿದ ಸದಸ್ಯರು ಕೂಡ ಸುನೀಲಗೌಡ ಪಾಟೀಲರು ಕೇಳಿದ ಪ್ರಶ್ನೆಯನ್ನು ಪ್ರಶಂಸಿಸಿ, ಇಡೀ ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರ ಪರವಾಗಿ ಯುವ ಸದಸ್ಯ ಸುನೀಲಗೌಡ ಪಾಟೀಲರು ಈ ಪ್ರಶ್ನೆ ಕೇಳಿದ್ದು, ನಾವೆಲ್ಲ ಇವರನ್ನು ಬೆಂಬಲಿಸುತ್ತೇವೆ. ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಿಸುವುದು ಅತ್ಯವಶ್ಯಕವಾಗಿದೆ ಎಂದರು.
ಸರ್ಕಾರದ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವಧನ ಅತ್ಯಂತ ಕಡಿಮೆಯಾಗಿರುವುದನ್ನು ಒಪ್ಪಿಕೊಂಡು, ಗೌರವಧನವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದೀರ್ಘ ಚರ್ಚೆ:
ಸುನಿಲ್ ಗೌಡ ಪ್ರಸ್ತಾಪಿಸಿದ ವಿಚಾರದ ಮೇಲೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ತೀವ್ರ ಚರ್ಚೆ ನಡೆಸಿದರು. ಪ್ರಮುಖವಾಗಿ ಪ್ರತಿಪಕ್ಷನಾಯಕ ಎಸ್.ಆರ್.ಪಾಟೀಲ್ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಅಧ್ಯಕ್ಷರ ಗೌರವ ಧನ ಹೆಚ್ಚಳ ಅತ್ಯವಶ್ಯಕ. ಸರ್ಕಾರ ತನ್ನ ಇತಿಮಿತಿಯಲ್ಲಿ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಅಂತಿಮವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಿಎಂ ಜೊತೆ ಹಾಗೂ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಿ ಸದನಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿದರು.