ಬೆಂಗಳೂರು: ರಸ್ತೆ ಮಾಡಲು ವಶಪಡಿಸಿಕೊಂಡಿದ್ದ ಸಾವಿರಾರು ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಳಸಿಕೊಂಡು ನೈಸ್ ಸಂಸ್ಥೆ ಮುಖ್ಯಸ್ಥರು ಅಕ್ರಮವಾಗಿ 15-20 ಲಕ್ಷ ಕೋಟಿ ರೂ. ಸಂಪಾದಿಸಿದ್ದಾರೆ. ರೈತರಿಂದ ಪಡೆದ 18 ಸಾವಿರ ಎಕರೆಗೆ ಪರಿಹಾರ ನೀಡಿಲ್ಲ. ಅನೇಕ ವರ್ಷದಿಂದ ರೈತರು ಹೈರಾಣಾಗಿದ್ದಾರೆ ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ವಿಧಾನ ಪರಿಷತ್‌ನಲ್ಲಿ ನಿಯಮ 68 ರ ಅಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಸ್ತೆ ಬೆಂಗಳೂರು ಬಿಟ್ಟು ಹೊರಗೆ ಬೆಳೆದೇ ಇಲ್ಲ. ಒಂದು ಹಂತದಲ್ಲಿ 150 ಕೋಟಿ ರೂ ಹಾಗೂ ಎರಡನೇ ಹಂತದಲ್ಲಿ 2100 ಕೋಟಿ ರೂ. ಸಾಲ ಮಾಡಲಾಗಿದೆ. ನಿರಂತರವಾಗಿ ಲಕ್ಷಾಂತರ ರೂ ಮೌಲ್ಯದ ಗಣಿಗಾರಿಕೆ ನಡೆಯುತ್ತಿದೆ.
ಟೋಲ್‌ನಲ್ಲಿ ಕೊಟ್ಯಂತರ ರೂ. ಆದಾಯ ಬರುತ್ತಿದೆ. ದ್ವಿಚಕ್ರ ವಾಹನಕ್ಕೂ ಟೋಲ್ ಪಡೆಯುವ ಏಕೈಕ ರಸ್ತೆ ಇದು. ಈ ಕೊಳ್ಳೆಯನ್ನು ಎಷ್ಟು ದಿನ ಸಹಿಸುತ್ತೀರಿ. ಎಷ್ಟು ದಿನ ರೈತರ ಕಷ್ಟ ಸಹಿಸುತ್ತೀರಿ. ಯೋಜನೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಷ್ಟ್ರೀಕರಣ ಮಾಡಬೇಕು. ನಾಡಿನ ಜನರಿಗೆ ಆಗುವ ದ್ರೋಹ ನಿಲ್ಲಲಿ ಎಂದರು.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಇದು 111 ಕಿ.ಮೀ. ಹಾಗೂ ಪೆರಿಫೆರಲ್, ಸೇವಾ ರಸ್ತೆಗಳು ಹತ್ತಾರು ಕಿ.ಮಿ.ಅಷ್ಟಾಗಿತ್ತು. ಒಂದು ಉತ್ತಮ ಉದ್ದೇಶದಿಂದ ರಸ್ತೆ ಮಾಡಲು ಒಬ್ಬರು ಬರುತ್ತಾರೆ. ಅವಕಾಶ ಸಿಗದವರು ಬೇಸರ ಪಟ್ಟುಕೊಳ್ಳುವುದು ಸಹಜ. ಈ ಯೋಜನೆಗೆ 20197 ಎಕರೆ ಮಾತ್ರ ಭೂ ಬಳಕೆಯ ಪ್ರಸ್ತಾವ ಆಗುತ್ತದೆ. ಖಾಸಗಿ ಜಾಗವೇ 18,246 ಎಕರೆ ಆಗುತ್ತದೆ. 5 ಸಾವಿರ ಎಕರೆ ಸರ್ಕಾರದ್ದು ಆಗಲಿದೆ. ಸರ್ಕಾರ 2 ಸಾವಿರ ಹಾಗೂ ಖಾಸಗಿಯವರ 4 ಸಾವಿರ ಎಕರೆ ಭೂಮಿಮಾತ್ರ ನೀಡಿಕೆಯಾಗಿದೆ. ಒಟ್ಟಾರೆ 6 ಸಾವಿರ ಎಕರೆ ನೀಡಿಕೆಯಾಗಿದೆ. ಇಂತಹ ಯೋಜನೆ ಉಪಯೋಗಿ ಆಗಿದ್ದು, ಸಾಕಷ್ಟು ಮಂದಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಕಂದಕಕ್ಕೆ ಉರುಳಿದ ಖಾಸಗಿ ಬಸ್, 5 ಪ್ರಯಾಣಿಕರು ಗಂಭೀರ
ದೇವೇಗೌಡರು ಈ ವಿಚಾರವಾಗಿ ನ್ಯಾಯಾಲಯ ಮೊರೆ ಹೋಗಿದ್ದರು. ಇದಕ್ಕೆ ಅಶೋಕ್ ಖೇಣಿ ಮಾನನಷ್ಟ ಮೊಕದ್ದಮೆ ಹೂಡಿದ್ದರು ಎನ್ನುತ್ತಿದ್ದಂತೆ ಜೆಡಿಎಸ್ ಸದಸ್ಯ ಭೋಜೇಗೌಡ ಹಾಗೂ ತಿಪ್ಪೇಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ರಮೇಶ್ ಪರ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸದಸ್ಯರಾದ ಎಸ್. ರವಿ ಮತ್ತಿತರ ಸದಸ್ಯರು ಆಕ್ರೋಶ ಹೊರಹಾಕಿದರು. ಪರಸ್ಪರ ವಾಕ್ಸಮರ ನಡೆಯಿತು. ಗದ್ದಲ ತಹಬಂದಿಗೆ ತಂದ ಸಭಾಪತಿ ಗಳು ರಮೇಶ್ ಗೆ ಮಾತು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಮಾನನಷ್ಟ ಮೊಕದ್ದಮೆ ಹಾಕಿದ ಹಿನ್ನೆಲೆಯಲ್ಲಿ ನೈಸ್ ವಿಚಾರ ಪ್ರಸ್ತಾಪಿಸುವುದಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ಕೊಟ್ಟಿದ್ದಾರೆ. ದೇವೇಗೌಡರಿಗೆ ಮಾತನಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸದಸ್ಯರ ಮೂಲಕ ಮಾತನಾಡಿಸಿದ್ದಾರೆ ಎಂದರು. ಭೋಜೇಗೌಡರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯನಾಗಿ ವಿಷಯ ಪ್ರಸ್ತಾಪಿಸುವ ಅಧಿಕಾರ ಇದೆ ಎಂದರು. ಸಾಕಷ್ಟು ಗದ್ದಲದ ನಂತರ ಮಾತು ಮುಂದುವರಿಸಿದ ರಮೇಶ್, ರೈತರಿಂದ ಪಡೆದ ಭೂಮಿಗೆ ಪರ್ಯಾಯವಾಗಿ ಸೈಟ್ ನೀಡುವ ಆದೇಶ ಇದೆ. ಭೂಮಿ ಇದೆ. ಅದನ್ನು ಒದಗಿಸಬೇಕು. ಯೋಜನೆಗೆ ವಶಪಡಿಸಿಕೊಂಡ ಭೂಮಿ ಸರ್ಕಾರದ ಬಳಿಯೇ ಇದೆ. ಆದಷ್ಟು ಬೇಗ ಬಾಕಿ ಇರುವ ಯೋಜನೆ ಪೂರ್ಣಗೊಳಿಸಿ. ಯಾವುದೇ ಕಾನೂನು ತೊಡಕು ಎದುರಾಗಬಾರದು. ಪ್ರಗತಿಯ ಬಗ್ಗೆ ಬೆಂಬಲ ನೀಡೋಣ. ಜನರಿಗೆ ಉತ್ತಮ ಯೋಜನೆ ಸಿಗಬೇಕು ಎಂದು ತಿಳಿಸಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ನಮ್ಮ ಸರ್ಕಾರ ನೈಸ್ ರಸ್ತೆ ವಿಚಾರವಾಗಿ ರೈತರ, ಸಾರ್ವಜನಿಕರ ಹಿತ ಕಾಪಾಡಲು ಬದ್ಧವಾಗಿದೆ. ದೇವೇಗೌಡರು ಉತ್ತಮ ಆಶಯದೊಂದಿಗೆ ಯೋಜನೆಗೆ 1995 ರಲ್ಲಿ ಒಂದು ತೀರ್ಮಾನ ಕೈಗೊಳ್ಳುತ್ತಾರೆ. ಸಕಾಲಕ್ಕೆ ಯೋಜನೆ ಮುಗಿದಿದ್ದರೆ ಸಾಕಷ್ಟು ಅಭಿವೃದ್ಧಿ ಆಗಿರುತ್ತಿತ್ತು. 11 ಮಂದಿ ಈ ಮಧ್ಯೆ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. 400 ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿವೆ. 300 ಇತ್ಯರ್ಥ ಆಗಿದೆ. 100 ಪ್ರಕರಣ ಜಾರಿಯಲ್ಲಿದೆ. ಹೆಚ್ಚಿನ ಮಾತು ಹೇಳಲು ಸಾಧ್ಯವಿಲ್ಲ. ಇಂತಹ ಯೋಜನೆ ಬರಬೇಕಿದೆ. ಇಲ್ಲಿ 20193 ಎಕರೆ 199 6 ರಲ್ಲಿ ಭೂಮಿ ಯೋಜನೆಗೆ ಭೂಮಿ ವಶಕ್ಕೆ ಪಡೆಯಲಾಗಿದೆ.
ಇದು 1995 ರಲ್ಲಿ 29 ಸಾವಿರ ಎಕರೆ ಬೇಕಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ವಶಕ್ಕೆ ಭೂಮಿ ನೀಡಿದ ರೈತರು ಮಾತ್ರ ಪರಿಹಾರಕ್ಕೆ ಅರ್ಹರು. ನೈಸ್ ಸಂಸ್ಥೆಗೆ ಕಂಡೀಶನಲ್ ಸೇಲ್ ಡೀಡ್ ಮಾಡಿಕೊಟ್ಟಿದ್ದೇವೆ. ಇದುವರೆಗೂ ಅಧಿಕಾರಕ್ಕೆ ಬಂದ ಸರ್ಕಾರಗಳು ಒಟ್ಟಾರೆಯಾಗಿ 2 ಸಾವಿರ ಎಕರೆಯಷ್ಟು ಭೂಮಿ ವಶಕ್ಕೆ ಪಡೆಯಲಾಗಿದೆ. ಮಹಾನಗರಕ್ಕೆ ಫೆರಿಫೆರಲ್ ರಸ್ತೆಯ ಅನಿವಾರ್ಯತೆ ಇದೆ. ನೈಸ್ ಸಮಸ್ಯೆ ಹಿನ್ನೆಲೆ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ಸದನದ ಪ್ರತಿನಿಧಿಗಳ ಜತೆ ನೈಸ್ ಸಂಸ್ಥೆ ಪ್ರತಿನಿಧಿಗಳನ್ನೂ ಸೇರಿಸಿ ಸಭೆ ನಡೆಸುತ್ತೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ ಎಂಬುದು ಆಶಯ ಎಂದು ಸದನಕ್ಕೆ ತಿಳಿಸಿದರು.