ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕಂದಾಯ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಸಬ್ ರಿಜಿಸ್ಟ್ರಾರ್ ಕಚೇರಿಯ ಆನ್‍ಲೈನ್ ಸೇವೆಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಂಡರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸಲಹೆ ನೀಡಿದರು. ಇದಕ್ಕೂ ಮುನ್ನ ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಶ್ನೆ ಕೇಳಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಭ್ರಷ್ಟಾಚಾರವೂ ಮುಗಿಲು ಮುಟ್ಟಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ಅಶೋಕ್, ಉಪ ನೋಂದಣಿ ಕಚೇರಿಗಳಲ್ಲಿ ಬಹಳಷ್ಟು ವರ್ಷಗಳಿಂದ ಮಧ್ಯವರ್ತಿಗಳ ಹಾವಳಿ ಇದ್ದು, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಒಪ್ಪಿಕೊಂಡರಲ್ಲದೆ, ಆನ್‌ಲೈನ್ ಸೇವೆಯನ್ನು ಹೆಚ್ಚಾಗಿ ಬಳಸಿದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಕಂದಾಯ ಇಲಾಖೆಯ 54 ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ತರಲಾಗಿದೆ. ಬಹುತೇಕ ಸೇವೆಗಳು ಆನ್ಲೈನ್ನಲ್ಲಿ ಲಭ್ಯ ಇವೆ. ಅದನ್ನು ಬಳಸಿಕೊಂಡರೆ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ನಮ್ಮ ಸರ್ಕಾರದ ಅವಧಿಯಲ್ಲಿ ಕೆಲ ಉಪ ನೋಂದಣಿ ಕಚೇರಿಗಳಲ್ಲಿ ಮಾತ್ರ ಆನ್‌ಲೈನ್ ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅದು ಉತ್ತಮ ಎನಿಸಿದರೆ ರಾಜ್ಯದ ಎಲ್ಲಾ ಕಚೇರಿಗಳಿಗೂ ವಿಸ್ತರಣೆ ಮಾಡಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಈಗ ಕೊರೊನಾ ಸೋಂಕಿನ ಭೀತಿಯಿದೆ. ಇದೇ ಅವಕಾಶವನ್ನು ಬಳಸಿಕೊಂಡು ಎಲ್ಲಾ ನೋಂದಣಿಗಳನ್ನು ಆನ್‍ಲೈನ್ ಮಾಡಿ. ಅನಿವಾರ್ಯ ಸಂದರ್ಭದಲ್ಲಿ ಶೇ. 5ರಷ್ಟು ಮಾತ್ರ ನೇರವಾಗಿ ನೋಂದಣಿಗೆ ಅವಕಾಶ ನೀಡಿ. ಎರಡು ತಿಂಗಳು ಇದೇ ವ್ಯವಸ್ಥೆ ಮುಂದುವರೆದರೆ ಜನ ಒಗ್ಗಿಕೊಳ್ಳುತ್ತಾರೆ. ಮುಂದೆ ತನ್ನಷ್ಟಕ್ಕೆ ತಾನೇ ಎಲ್ಲವೂ ಹೊಂದಿಕೊಳ್ಳುತ್ತದೆ ಎಂದು ಸಲಹೆ ಮಾಡಿದರು. ನಂತರ ಜೆಡಿಎಸ್‍ನ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಬೆಂಗಳೂರಿನಲ್ಲಿ ಸುಮಾರು 40 ವರ್ಷಗಳಿಂದಲೂ ಸಬ್ ರಿಜಿಸ್ಟ್ರಾರ್ ಬೇರು ಬಿಟ್ಟಿದ್ದಾರೆ. ಮೊದಲು ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿ. ಕೆಲವರಂತೂ ಸರ್ಕಾರಿ ಭೂಮಿಯನ್ನೇ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಈ ವೇಳೆ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ದಲ್ಲಾಳಿಗಳನ್ನು ಮೊದಲು ಮಟ್ಟ ಹಾಕಿ ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಹಿರಿಯ ಶಾಸಕ ರಮೇಶ್ ಕುಮಾರ್, ಮೊದಲು ಇಲ್ಲಿಯೂ ಸ್ವಚ್ಛವಾಗಬೇಕು ಎಂದು ಕಿಚಾಯಿಸಿದರು. ಕಂದಾಯ ಇಲಾಖೆ ಸಚಿವರು ಯಾವ ಕಾರು ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಉಪ ನೋಂದಣಿ ಕಚೇರಿಯ ದಲ್ಲಾಳಿಗಳು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ಜೆಡಿಎಸ್ ಸದಸ್ಯ ಅನ್ನದಾನಿ ಹೇಳಿದರು.
ಇನ್ನು ತಮ್ಮ ಉತ್ತರವನ್ನು ಪುನರುಚ್ಚರಿಸಿದ ಸಚಿವರು, ಎಲ್ಲರ ಸಲಹೆಗಳನ್ನು ಪರಿಗಣಿಸುತ್ತೇವೆ. ಆದಷ್ಟು ಜನ ಆನ್‍ಲೈನ್ ಸೇವೆ ಬಳಕೆ ಮಾಡಿಕೊಂಡರೆ ಸಾಕು ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಹೇಳಿದರು.