ಬೆಂಗಳೂರು: ಹುಬ್ಬಳ್ಳಿಯ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಪ್ರಕರಣ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು. ಈ ಪ್ರಕರಣದ ಬಗ್ಗೆ ಮೃದು ಧೋರಣೆ ತಳೆದಿರುವ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಪ್ರತಿಪಕ್ಷಗಳಿಂದ ಕೇಳಿಬಂತು.
ಎರಡನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ನಿಯಮ 330 ಎ ಅಡಿ ಸಾರ್ವಜನಿಕ ಜರೂರು ವಿಚಾರದ ಮೇಲೆ ಹುಬ್ಬಳ್ಳಿ ಪ್ರಕರಣವನ್ನು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ವಿಚಾರ ಪ್ರಸ್ತಾಪಿಸಿದರು. ನ್ಯಾಯಾಲಯದ ಆವರಣದಲ್ಲಿ ಗಲಾಟೆ, ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಿಡುಗಡೆ ಅನುಮಾನ ಮೂಡಿಸಿದೆ. ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ದೇಶವಿರೋಧಿ ಘೋಷಣೆ ಕೂಗಿದವರ ವಿರುದ್ಧ ಮೃದುಧೋರಣೆ ಅನುಸರಿಸಿದ್ದಾರೆ. ತಕ್ಷಣ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ದೇಶದ ಐಕ್ಯತೆ, ಭದ್ರತೆ ಸಾರ್ವಭೌಮತೆಗೆ ತರುವ ಘೋಷಣೆ ಕೂಗಲಾಗಿದೆ. ದೇಶದ್ರೋಹದ ಘೋಷಣೆ ಕೂಗಿದ್ದಾರೆ, ಪವಿತ್ರ ನೆಲದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಇಂತವರ ಬಗ್ಗೆ ಮೃದುಧೋರಣೆ ತೆಗೆದುಕೊಳ್ಳಲು ಪೊಲೀಸರ ಮೇಲೆ ಒತ್ತಡ ಇರಬೇಕು. ಇದು ಸಲ್ಲದು, ಕೂಡಲೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ, ಇದು ಗಂಭೀರ ಪ್ರಕರಣ ಎಂದು ಒತ್ತಾಯಿಸಿದರು.
ನಂತರ ಕಾಂಗ್ರೆಸ್ ಐವಾನ್ ಡಿಸೋಜ ಮಾತನಾಡಿ, ಮೃದು ಧೋರಣೆ ಅನುಸರಿಸಿದ ಹುಬ್ಬಳ್ಳಿ ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಯುಕ್ತರನ್ನು ಅಮಾನತು ಮಾಡಬೇಕು ಎಂದರು.
ನಿಯಮ 330ಎ ಅಡಿ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಪ್ರತಿಕ್ರಿಯೆ ನೀಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ. ಗೃಹ ಮಂತ್ರಿಗಳ ಮೂಲಕ ಸಮರ್ಪಕ ಉತ್ತರ ಕೊಡಿಸುತ್ತೇನೆ ಎನ್ನುವ ಭರವಸೆ ನೀಡಿದರು.