ಬೆಂಗಳೂರು: ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಮತ್ತು ಹಿಂದಿನ ಸರ್ಕಾರಗಳು ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ರದ್ದು ಮಾಡಿರುವುದು ವಿಧಾನಸಭೆಯಲ್ಲಿ ಇಂದು ಭಾರೀ ಗದ್ದಲಕ್ಕೆ ಕಾರಣವಾಗಿ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದಕ್ಕೆ ಪ್ರತಿಯಾಗಿ ಸರ್ಕಾರದ ವತಿಯಿಂದಲೂ ಬಲವಾದ ಸಮರ್ಥನೆ ಕೇಳಿಬಂದಿತು. ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶವನ್ನುದ್ದೇಶಿಸಿ ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡುವ ವೇಳೆ, ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡೋದಿಲ್ಲ ಎಂದಿದ್ದರು. ಆದರೆ, ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ಈ ಸರ್ಕಾರ ಹಿಂಪಡೆದಿದೆ. ಗುದ್ದಲಿ ಪೂಜೆ ನಡೆದಿರುವ ಕಾಮಗಾರಿಗಳ ಅನುದಾನವನ್ನು ತಡೆ ಹಿಡಿಯಲಾಗಿದೆ. ಎರಡೂ ಪಕ್ಷಗಳ ಶಾಸಕರಿಗೆ ಈ ರೀತಿ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಂತೆ ಪ್ರತಿಪಕ್ಷಗಳ ಸಾಲಿನ ಶಾಸಕರು ತೀವ್ರ ಗದ್ದಲ ಎಬ್ಬಿಸಿದರು.
ಪ್ರವಾಹ ಪ್ರದೇಶಗಳಲ್ಲಿ ಹಣದ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಅನುದಾನ ವಾಪಸ್ ಪಡೆಯಲಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಶಾಸಕರು ಅಂಕಿ-ಅಂಶಗಳ ಸಹಿತ ಆಕ್ರೋಶ ವ್ಯಕ್ತಪಡಿಸಿದರು. ಡಿಸಿಎಂ ಗೋವಿಂದ ಕಾರಜೋಳ ಮಧ್ಯಪ್ರವೇಶ ಮಾಡಿ, ಇತಿಹಾಸದಲ್ಲೇ ಆಗದಷ್ಟು ಮಳೆ ಸುರಿದಿದೆ, ಪ್ರವಾಹ ಬಂದಿದೆ. ಪಿಡಬ್ಲೂಡಿ ಇಲಾಖೆಯೊಂದರಲ್ಲಿ 721 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದರಲ್ಲದೆ, ಅನುದಾನ ಹಂಚಿಕೆಯಲ್ಲಿ ಹಿಂದಿನ ಸರ್ಕಾರಗಳಲ್ಲೂ ತಾರತಮ್ಯವಾಗಿದೆ ಎಂದು ಹೇಳಿದರು.
ಪಿಡಬ್ಲೂಡಿ ಇಲಾಖೆಯಲ್ಲಿ ಅನುದಾನ ಹಂಚಿಕೆಯಲ್ಲಿ 36 ಸಾವಿರ ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. 9450 ಕೋಟಿ ಅನುದಾನವಿದೆ. 2018-19, 2019-20ನೇ ಸಾಲಿನಲ್ಲಿ ರಸ್ತೆಗಳ ನಿರ್ಮಾಣಕ್ಕೆ 1479 ಕೋಟಿ ಅನುದಾನ ಲಭ್ಯವಿದ್ದರೆ, 8482 ಕೋಟಿ ರೂ. ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಕೆಶಿಪ್ ಯೋಜನೆಯಡಿ 414 ಕೋಟಿ ರೂ. ಅನುದಾನ ಲಭ್ಯವಿದ್ದರೆ, 3490 ಕೋಟಿ ರೂ. ಯೋಜನೆಗಳು ಮಂಜೂರಾಗಿವೆ. ಕಟ್ಟಡ ಕಾಮಗಾರಿಗಳಿಗೆ ಅನುದಾನ ಲಭ್ಯತೆಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಈ ರೀತಿಯ ನಿರ್ಧಾರಗಳು ಆರ್ಥಿಕ ಶಿಸ್ತನ್ನು ಕಾಪಾಡುವುದಿಲ್ಲ. ಅನುದಾನದ ಲಭ್ಯತೆಯನ್ನು ಆಧರಿಸಿ ಕಾಮಗಾರಿಗಳಿಗೆ ಮಂಜೂರಾತಿ ನೀಡಬೇಕು. ಮನಸೋಇಚ್ಛೆ ಆರ್ಥಿಕ ಇಲಾಖೆಯ ವಿರೋಧವನ್ನು ಲೆಕ್ಕಿಸದೆ ಮಂಜೂರಾತಿ ನೀಡಿದ್ದರಿಂದಾಗಿ ಹೆಚ್ಚುವರಿ ಕಾಮಗಾರಿಗಳನ್ನು ರದ್ದುಗೊಳಿಸಬೇಕಾಗಿದೆ. ಇದು ರಾಜಕೀಯ ದ್ವೇಷ ಅಲ್ಲ. ಆರ್ಥಿಕ ಶಿಸ್ತು ಕಾಪಾಡುವ ಕ್ರಮ ಎಂದು ಕಾರಜೋಳ ಸಮರ್ಥಿಸಿಕೊಂಡರು.
ಆಗ ಸಿದ್ದರಾಮಯ್ಯನವರು ಅದು ರೇವಣ್ಣ ಮಾಡಿದ ತಪ್ಪು, ನನಗೂ ಗೊತ್ತಿದೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಗೋವಿಂದ ಕಾರಜೋಳ, ಕರ್ನಾಟಕಕ್ಕೆ ಪೆಟ್ರೋಲ್, ಡೀಸೆಲ್ ಸೆಸ್‍ನಿಂದ 500 ಕೋಟಿಗಿಂತ ಹೆಚ್ಚಿನ ಅನುದಾನ ಬರುವುದಿಲ್ಲ. ಆದರೆ ಸಿಆರ್ಎಫ್ನಲ್ಲಿ 7500 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು.
ಕರ್ನಾಟಕಕ್ಕೆ ಅನ್ಯಾಯ: ಹಣಕಾಸು ಆಯೋಗದ 14ನೇ ಮತ್ತು 15ನೇ ಅನುದಾನ ಹಂಚಿಕೆಯಲ್ಲಿ ವರ್ಷಕ್ಕೆ ಸುಮಾರು 11 ಸಾವಿರ ಕೋಟಿ ರೂ.ಗಳಷ್ಟು ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದು, 5 ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಾಗುತ್ತಿರುವ ತಾರತಮ್ಯ ಮತ್ತು ರಾಜ್ಯಕ್ಕಾದ ನಷ್ಟದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು. ದೇಶದಲ್ಲಿ ತೆರಿಗೆ ವಸೂಲಿಯಲ್ಲಿ ಮಹಾರಾಷ್ಟ್ರ 1ನೇ ಸ್ಥಾನ ಹಾಗೂ ದೆಹಲಿ 2ನೇ ಸ್ಥಾನದಲ್ಲಿದ್ದರೆ, ಕರ್ನಾಟಕ 3ನೇ ಸ್ಥಾನದಲ್ಲಿದೆ. ಕೇಂದ್ರದಿಂದ ಅನುದಾನ ಹಂಚಿಕೆ ವಿಷಯದಲ್ಲಿ ನಮಗೆ ಭಾರೀ ಅನ್ಯಾಯವಾಗುತ್ತಿದೆ. 1 ರೂ. ಅಂದರೆ 100 ಪೈಸೆ ತೆರಿಗೆ ವಸೂಲಿ ಮಾಡಿ ಕೇಂದ್ರಕ್ಕೆ ಕೊಟ್ಟರೆ, ಉತ್ತರ ಪ್ರದೇಶ 198 ಪೈಸೆ, ಗುಜರಾತ್ 135 ಪೈಸೆ, ಬಿಹಾರ 200 ಪೈಸೆಯನ್ನು ಅನುದಾನ ರೂಪದಲ್ಲಿ ವಾಪಸ್ ಪಡೆದುಕೊಳ್ಳುತ್ತಿವೆ. ಆದರೆ ಕರ್ನಾಟಕಕ್ಕೆ ಸಿಗುತ್ತಿರುವುದು 45 ಪೈಸೆ ಮಾತ್ರ. ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಜಾಸ್ತಿಯಿದೆ. ಬಿಹಾರದಲ್ಲಿ ಬಡತನ ಇದೆ ಎಂದು ಹೆಚ್ಚು ಅನುದಾನ ಕೊಡುತ್ತಾರೆ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಗುಜರಾತ್‍ಗೆ ಅನುದಾನ ಕೊಡುವ ಮಾನದಂಡವೇನು? ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
2019-20ನೇ ಸಾಲಿನ ಬಜೆಟ್‍ನಲ್ಲಿ 39 ಸಾವಿರ ಕೋಟಿ ರೂ. ಕೇಂದ್ರದಿಂದ ಆರ್ಥಿಕ ನೆರವು ಬರಲಿದೆ ಎಂಬ ಅಂದಾಜಿಸಲಾಗಿತ್ತು. ಅದರಲ್ಲಿ 9 ಸಾವಿರ ಕೋಟಿ ರೂ.ಗಳು ಕಡಿಮೆಯಾಗಿವೆ. ಹಣಕಾಸು ಆಯೋಗದ ನಿರ್ಧಾರದಲ್ಲೂ ಅನ್ಯಾಯವಾಗಿದೆ. ಅನುದಾನದ ಹಂಚಿಕೆಯಲ್ಲೂ ತಾರತಮ್ಯವಾಗಿದೆ. ಕೇಂದ್ರದಿಂದ ಬರಬೇಕಾದ ಪಾಲು ಸರಿಯಾಗಿ ಬರುತ್ತಿಲ್ಲ. ನೆರೆಯಂತಹ ಗಂಭೀರ ಪರಿಸ್ಥಿತಿಯಲ್ಲೂ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಕೇಂದ್ರ ಕರ್ನಾಟಕದ ವಿಷಯದಲ್ಲಿ ತಾರತಮ್ಯ ಅನುಸರಿಸುತ್ತಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು. 2019-20ನೇ ಸಾಲಿನಲ್ಲಿ 39 ಸಾವಿರ ಕೋಟಿ ರೂ.ಗಳ ಅನುದಾನವನ್ನು ಕೇಂದ್ರದಿಂದ ನಿರೀಕ್ಷೆ ಮಾಡಲಾಗಿತ್ತು. 2020-21ನೇ ಕೇಂದ್ರದ ಬಜೆಟ್‍ನಲ್ಲಿ ಕೇವಲ 28,500 ಕೋಟಿ ರೂ. ನಿಗದಿಯಾಗಿದೆ. ವರ್ಷದಿಂದ ವರ್ಷಕ್ಕೆ ಅನುದಾನ ಹೆಚ್ಚಾಗಬೇಕೆ ಹೊರತು ಕಡಿಮೆಯಾಗಬಾರದು ಎಂದರು. ನೆರೆ ಹಾವಳಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಮೊದಲು 1200 ಕೋಟಿ, ನಂತರ 680 ಕೋಟಿ ರೂ. ಅನುದಾನ ನೀಡಿದೆ. ಒಟ್ಟು 1860 ಕೋಟಿ ರೂ.ಗಳನ್ನು ಮಂಜೂರಾತಿ ಮಾಡಿ 1657 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇದು ನೆರೆ ಹಾವಳಿ ನಷ್ಟ ನಿರ್ವಹಣೆಗೆ ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.