ಬೆಂಗಳೂರು: ಕಳೆದ ಏರ್ ಶೋ ಸಂದರ್ಭದಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದ್ದ ಹಿನ್ನೆಲೆ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ಇಲಾಖೆ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ ಮಾಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13ನೇ ಆವೃತ್ತಿಯ ಏರೋ ಇಂಡಿಯಾ-2021 ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ವರ್ಷ ಅಗ್ನಿ ಅವಘಡ ನಡೆದಿತ್ತು. ಹಿಂದೆ ಯಾವತ್ತೂ ಈ ರೀತಿಯ ಸಮಸ್ಯೆ ಆಗಿರಲಿಲ್ಲ. ಮೊದಲ ಬಾರಿಗೆ ಈ ರೀತಿ ಅನಾಹುತ ಆಗಿದ್ದರಿಂದ ಪರಿಹಾರ, ವಿಮೆ ವಿಚಾರದಲ್ಲಿ ಸಮಸ್ಯೆ ಆಗಿತ್ತು. ಈ ಬಾರಿ ಅಂತಹ ಘಟನೆ ಮರುಕಳಿಸದ ಹಾಗೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೈಡ್‌ಲೈನ್ಸ್ ಹಾಗೂ ಆ್ಯಪ್ ರಿಲೀಸ್ ಮಾಡಲಾಗಿದೆ ಎಂದರು.
ಏರೋ ಇಂಡಿಯಾ ಪ್ರದರ್ಶನದ ವೇಳೆ ಸಂಭವಿಸಬಹುದಾದ ಸುಮಾರು 10ಕ್ಕೂ ಹೆಚ್ಚು ಬಗೆಯ ವಿಪತ್ತುಗಳನ್ನು ಗುರುತಿಸಲಾಗಿದೆ. ವಿಪತ್ತು ನಿರ್ವಹಣೆಗಾಗಿ ಒಬ್ಬ ಪ್ರತ್ಯೇಕ ಅಧಿಕಾರಿಯನ್ನೇ ನಿಯೋಜಿಸಿದ್ದೇವೆ ಎಂದರು.
ಪ್ರಪ್ರಥಮ ಬಾರಿಗೆ ವಿಶೇಷ ಭೌಗೋಳಿಕ ಮಾಹಿತಿ ವ್ಯವಸ್ಥೆ (ಭೂ ವೈಜ್ಞಾನಿಕ ಮಾಹಿತಿ ವ್ಯವಸ್ಥೆ -GIS) ಅಂತರ್ಜಾಲ ತಾಣವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ವೈಮಾನಿಕ ಪುದರ್ಶನ-2021ಕ್ಕಾಗಿ http://dev.ksrsac.in/aeroshow/ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಒಳಾಂಗಣ ಹಾಗೂ ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಗಳ ಎಲ್ಲಾ ಅಂಶಗಳನ್ನು ಪ್ರಸ್ತುತಪಡಿಸಲಾಗಿದೆ ಎಂದರು.
ಫೆಬ್ರವರಿ 3ರಿಂದ 5ರವರೆಗೆ 2021ರ ಏರ್ ಶೋ ನಡೆಯಲಿದೆ. ಒಟ್ಟು 14 ರಾಷ್ಟ್ರಗಳ 541 ಪ್ರದರ್ಶಕರು ಭಾಗವಹಿಸಲಿದ್ದಾರೆ. 463 ಭಾರತೀಯ, 78 ವಿದೇಶಿ ಪ್ರದರ್ಶಕರು ಭಾಗವಹಿಸಲಿದ್ದಾರೆ. ಒಟ್ಟು 61 ವಿಮಾನಗಳು ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.
ವಿಪತ್ತು ಹಾಗೂ ತುರ್ತು ಸ್ಥಿತಿ ಘಟನೆಗಳನ್ನು ವರದಿ ಮಾಡಲು ಹಾಗೂ ಅವಶ್ಯವಿರುವ ಸಂಪನ್ಮೂಲಗಳನ್ನು ಗುರುತಿಸಿ ನೆರವಾಗಲು ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಪ್ರದರ್ಶನದ ಸ್ಥಳದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಗುರುತಿಸಲು ಆ್ಯಪ್ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ವಿಪತ್ತು ನಿರ್ವಹಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪನ್ಮೂಲಗಳು ಮತ್ತು ಇತರೆ ಗುಣಲಕ್ಷಣಗಳು ಹಾಗೂ ವಿವಿಧ ರೂಪುರೇಷೆಗಳನ್ನೊಳಗೊಂಡ ನಕ್ಷೆಗಳನ್ನು ರಚಿಸಲಾಗಿದೆ ಎಂದರು.
ಓದಿ: ಗಡಿಯೊಳಗೆ ನುಗ್ಗಲು ಶಿವಸೇನೆ ಯತ್ನ ವಿಫಲ: ಪೊಲೀಸರ ದಿಟ್ಟತನಕ್ಕೆ ಬೆಚ್ಚಿ ಕಾಲ್ಕಿತ್ತ 'ಮಹಾ' ಕಿಡಿಗೇಡಿಗಳು
ವೈಮಾನಿಕ ಪ್ರದರ್ಶನ-2021ರ ಸಂದರ್ಭದಲ್ಲಿ ಕೋವಿಡ್-19, ಬೆಂಕಿ ಅವಘಡ, ಕಟ್ಟಡ ಕುಸಿತ, ಕಾಲ್ತುಳಿತ, ವಿಮಾನ ಅಪಘಾತ ಅಣು ವಿಕಿರಣ ಅಪಾಯಗಳು, ಭಯೋತ್ಪಾದನಾ ಕೃತ್ಯ/ ಡ್ರೋನ್ ದಾಳಿ, ಸೈಬರ್ ದಾಳಿ, ಹವಾಮಾನ ವೈಪರೀತ್ಯ, ಕುಡಿಯುವ ನೀರು ಹಾಗೂ ಆಹಾರ ವಿಷ ಅಪಾಯ ಈ ಎಲ್ಲ ವಿಷಯಗಳನ್ನು ವಿಪತ್ತು ಎಂದು ಗುರುತಿಸಲಾಗಿದೆ ಎಂದರು.
ಹಳ್ಳಿಗೆ ನಡೆಯಿರಿ ಜಿಲ್ಲಾಧಿಕಾರಿಗಳೇ ಕಾರ್ಯಕ್ರಮ ಪುನಾರಂಭ: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಹಳ್ಳಿಗೆ ನಡೆಯಿರಿ ಜಿಲ್ಲಾಧಿಕಾರಿಗಳೇ ಕಾರ್ಯಕ್ರಮ ಪುನಾರಂಭಿಸಲಾಗುತ್ತಿದೆ. ತಿಂಗಳಿಗೊಮ್ಮೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅದಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವುದು ಕಡ್ಡಾಯಗೊಳಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಮ ವಾಸ್ತವ್ಯ ಮಾಡುವುದು ಕಡ್ಡಾಯವಾಗಿದೆ. ಅಧಿಕಾರಿಗಳು ಯಾವುದೇ ಗ್ರಾಮ ನಿವಾಸಿಗರ ಮನೆಯಲ್ಲಿ ಊಟ ಮಾಡುವ ಹಾಗಿಲ್ಲ. ಅಂಗನವಾಡಿಯಲ್ಲಿ ಊಟ ಮಾಡಬೇಕು ಎಂದು ವಿವರಿಸಿದರು.