ಬೆಂಗಳೂರು: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿವ್ಯಾಂಗರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗೆ ವಿಶೇಷ ಅದ್ಯತೆ ನೀಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಬಿವಿಎಸ್ಎಸ್ ಮರಾಠ ಬಳಿ ನಾರಾಯಣ್ ಸೇವಾ ಸಂಸ್ಥಾನದಿಂದ ಏರ್ಪಡಿಸಿದ್ದ ಕೃತಕ ಅಂಗಾಂಗ ಜೋಡಣಾ ಶಿಬಿರದಲ್ಲಿ ಅವರು ಮಾತನಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ತಾವೂ ಕೂಡ ಈ ಸಚಿವಾಲಯದ ನೇತೃತ್ವ ವಹಿಸಿದ್ದಾಗ ಉತ್ತಮ ಕೆಲಸ ಮಾಡಿದ್ದನ್ನು ಸ್ಮರಿಸಿಕೊಂಡರು. ತಮ್ಮ ಅವಧಿಯಲ್ಲಿ ಹತ್ತು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿತ್ತು ಎಂದು ಅಭಿಮತ ವ್ಯಕ್ತಪಡಿಸಿದರು.
171 ಕೋಟಿ ವೆಚ್ಚದಲ್ಲಿ ದಿವ್ಯಾಂಗರಿಗೆ ಕ್ರೀಡಾ ಕೇಂದ್ರ ಸ್ಥಾಪನೆ : ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯ ಎಡಿಐಪಿ ಯೋಜನೆಯಡಿಯಲ್ಲಿ ಸ್ಮಾರ್ಟ್ ಫೋನ್, ಡಿಜಿಪ್ಲೇಯರ್ ಮತ್ತು ವಾಕಿಂಗ್ ಸ್ಟಿಕ್ ಮತ್ತು ಸ್ಮಾರ್ಟ್ ಕೇನ್ ನಂತಹ ಪರಿಕರಗಳನ್ನು ದೃಷ್ಟಿಹೀನರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ರೂ.171 ಕೋಟಿ ವೆಚ್ಚದಲ್ಲಿ ವಿಕಲಚೇತನರ ಕ್ರೀಡಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಸೆಹೋರ್ ನಲ್ಲಿ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಿವ್ಯಾಂಗರ ಸಬಲೀಕರಣಕ್ಕೆ ಸ್ವಯಂಸೇವಾ ಸಂಸ್ಥೆಗಳು ಶ್ರಮ: ದಿವ್ಯಾಂಗರ ಸಬಲೀಕರಣಕ್ಕಾಗಿ ಸರ್ಕಾರದ ಜತೆಗೆ ಕಾರ್ಪೊರೇಟ್ ಜಗತ್ತು ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳು ಸಹ ಶ್ರಮಿಸುತ್ತಿವೆ. ಅದರಲ್ಲಿ ನಾರಾಯಣ ಸೇವಾ ಸಂಸ್ಥಾನ ಒಂದಾಗಿದೆ. ನಾರಾಯಣ ಸೇವಾ ಸಂಸ್ಥಾನದಂತಹ ಸಂಸ್ಥೆಗಳು ಸರ್ಕಾರದ ಸಾಮಾಜಿಕ ಯೋಜನೆಗಳನ್ನು ನಿರ್ಗತಿಕರಿಗೆ, ಬಡವರಿಗೆ ಮತ್ತು ಅಂಗವಿಕಲರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ದಿವ್ಯಾಂಗ ಸಮೂಹಕ್ಕೆ ನಾರಾಯಣ್ ಸೇವಾ ಸಂಸ್ಥಾನ್ ಉತ್ತಮವಾಗಿ ಸ್ಪಂದಿಸುತ್ತಿದೆ. ಬದುಕು– ಬದುಕಲು ಬಿಡಿ ತತ್ವದಡಿ ಇದು ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರೂ ಸುಖವಾಗಿರಬೇಕು. ನಿರೋಗಿಯಾಗಿರಬೇಕು ಎಂಬುದು ನಮ್ಮ ಸಂಸ್ಕೃತಿಯ ಉದಾತ್ತ ಚಿಂತನೆಯಾಗಿದೆ. ಈ ಕುರಿತು ನಮಗೆ ಮಹಾಪುರುಷರು ಪ್ರೇರಣೆ ನೀಡಿದ್ದಾರೆ. ಭಾರತವನ್ನು ದಿವ್ಯಾಂಗ ಮುಕ್ತರಾಗಲು ನಾರಾಯಣ ಸೇವಾ ಸಂಸ್ಥಾನದ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ನಾರಾಯಣ್ ಸೇವಾ ಸಂಸ್ಥಾನ್ ಅಧ್ಯಕ್ಷ ಪ್ರಶಾಂತ್ ಅಗರ್ ವಾಲ್ ಮಾತನಾಡಿ,ನಾರಾಯಣ್ ಸೇವಾ ಸಂಸ್ಥಾನ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಯಶೋಗಾಥೆ ಅನಾವರಣಗೊಳಿಸಿದರು. ಈ ಬಾರಿ ನಡೆದ ಒಲಿಂಪಿಕ್ ನಲ್ಲಿ 8 ಪದಕಗಳನ್ನು ಗಳಿಸಿದರೆ, ದಿವ್ಯಾಂಗ ಸಮುದಾಯ ಪ್ಯಾರಾ ಒಲಿಂಪಿಕ್ ನಲ್ಲಿ 19 ಪದಕಗಳನ್ನು ಗೆದ್ದು ದಿಗ್ವಿಜಯ ಸಾಧಿಸಿದೆ ಎಂದು ಶ್ಲಾಘಿಸಿದರು.
ನಾರಾಯಣ್ ಸೇವಾ ಸಂಸ್ಥಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಶೇಷ್ ಮುಜುಂದಾರ್, ಜನರಲ್ ಮೋಟಾರ್ಸ್ ನ ನಿರ್ದೇಶಕ ಅನಿತ್ ಭಾಯ್ ಪಟೇಲ್ ಹಾಗೂ ಡಾ ದೈವಜ್ಞ ನರಸಿಂಹ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂಓದಿ:ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ.. ಯೋಜನೆಗೆ ಮಾ.23 ರಂದು ಸಿಎಂ ಚಾಲನೆ