ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂದು ಹೇಳುವ ಭರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ದಿ. ಚಿರಂಜೀವಿ ಸರ್ಜಾ ಅವರ ಮೃತದೇಹದ ಪೋಸ್ಟ್ ಮಾರ್ಟಂ ಯಾಕೆ ಮಾಡಲಿಲ್ಲ ಎಂದು ಕೇಳಿ ವಿವಾದಕ್ಕೆ ಕಾರಣರಾಗಿದ್ರು.
ಇಂದ್ರಜಿತ್ ಲಂಕೇಶ್ ಹೇಳಿಕೆಯು ಚಿರಂಜೀವಿ ಸರ್ಜಾ ಪತ್ನಿ ಮೇಘನಾರಾಜ್ ಮತ್ತು ಅವರ ಕುಟುಂಬಕ್ಕೆ ತುಂಬಾ ನೋವು ಉಂಟು ಮಾಡಿತ್ತು. ಜೊತೆಗೆ ಈ ಕುರಿತು ಚಿತ್ರರಂಗದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ತುಂಬಾ ನೊಂದಿದ್ದ ಮೇಘನಾ ರಾಜ್, ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ರು.
ಈ ವಿಚಾರವನ್ನ ಇಂದ್ರಜಿತ್ ಲಂಕೇಶ್ ಫಿಲ್ಮ್ ಚೇಂಬರ್ ಗಮನಕ್ಕೆ ತಂದ ಹಿನ್ನೆಲೆ ಫಿಲ್ಮ್ ಚೇಂಬರ್‌ಗೆ ಬಂದು ಅಧ್ಯಕ್ಷ ಗುಬ್ಬಿ ಜಯರಾಜ್, ಮಾಜಿ ಅಧ್ಯಕರಾದ ಸಾ ರಾ ಗೋವಿಂದು, ಕೆ ವಿ ಚಂದ್ರಶೇಖರ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್ ಸಮ್ಮುಖದಲ್ಲಿ ಇಂದ್ರಜಿತ್ ಲಂಕೇಶ್ ಕ್ಷಮೆ ಕೇಳಿದ್ದಾರೆ.
ಅಷ್ಟೇ ಅಲ್ಲ, ಮೇಘನಾರಾಜ್ ತಂದೆ ಸುಂದರರಾಜ್, ಪತ್ನಿ ಪ್ರಮೀಳಾ ಜೋಷಾಯ್ ಅವರು ನನ್ನನ್ನ ಚಿಕ್ಕವಯಸ್ಸಿನಲ್ಲೇ ಎತ್ತಿ ಆಡಿಸಿದ್ದಾರೆ. ಚಿರಂಜೀವಿ ಸರ್ಜಾ ಒಳ್ಳೆಯ ನಟ, ಈ ಡ್ರಗ್ಸ್ ಮಾಫಿಯಾಗೂ ಚಿರಂಜೀವಿ ಸರ್ಜಾಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಜಾ ಕುಟುಂಬದವರಿಗೆ ಕ್ಷಮೆ ಕೇಳಿದ್ದಾರೆ ಇಂದ್ರಜಿತ್ ಲಂಕೇಶ್.