ಬೆಂಗಳೂರು: ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ (ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ಸ್ಥಾಪನೆ ಹಾಗೂ ಹಾಲಿ ಇರುವ ಲ್ಯಾಬ್‌ಗಳಲ್ಲಿ ಸಿಬ್ಬಂದಿ ಮತ್ತು ಮೂಲಸೌಕರ್ಯ ಕೊರತೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿ ಕುರಿತು ನ್ಯಾಯಾಲಯಕ್ಕೆ ಸೂಕ್ತ ಸಲಹೆ ಹಾಗೂ ಸಹಕಾರ ನೀಡುವಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ಏಕಸದಸ್ಯ ಪೀಠದ ಮನವಿ ಮೇರೆಗೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಆಡಳಿತದ ನೇರ ಸಂಬಂಧ ಹೊಂದಿರುವ ಪ್ರಮುಖ ವಿಚಾರಗಳು ಈ ಸ್ವಯಂ ಪ್ರೇರಿತ ಅರ್ಜಿಯಲ್ಲಿವೆ. ಆದ್ದರಿಂದ, ಅರ್ಜಿ ವಿಚಾರಣೆಯಲ್ಲಿ ಪ್ರಾಧಿಕಾರ ಮಧ್ಯಪ್ರವೇಶಿಸಿ, ನ್ಯಾಯಾಲಯಕ್ಕೆ ಸೂಕ್ತ ಸಲಹೆ ನೀಡಲು ವಕೀಲರೊಬ್ಬರನ್ನು ನಿಯೋಜಿಸಬೇಕೆಂದು ಕೆಎಸ್‌ಎಲ್‌ಎಸ್‌ಎಗೆ ನಿರ್ದೇಶಿಸಿದ ಪೀಠ, ಅರ್ಜಿ ಪ್ರತಿಯನ್ನು ಪ್ರಾಧಿಕಾರದ ಕಾರ್ಯದರ್ಶಿಗೆ ಒದಗಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಏ.1ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಹೊಂದಿರುವ ಬೆಂಗಳೂರು ನಗರದಲ್ಲಿ ಒಂದೇ ಒಂದು ಎಫ್ಎಸ್ಎಲ್ ಕೇಂದ್ರ ಇರುವುದು ಒಪ್ಪುವಂತಹ ವಿಷಯವಲ್ಲ. ಇನ್ನು ಪರೀಕ್ಷೆಗಳನ್ನು ನಡೆಸಲು ಸಮಯ ನಿಗದಿಪಡಿಸುವಂತಹ ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಸ್ಯಾಂಪಲ್ ಪಡೆದುಕೊಂಡ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸುವವರೆಗೆ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ಪ್ರಕರಣದ ಹಿನ್ನೆಲೆ: ಕ್ರಿಮಿನಲ್ ಪ್ರಕರಣವೊಂದರ ಸಂಬಂಧ 2020ರ ಡಿ. 22ರಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನೀಡಿದ್ದ ಆದೇಶದಲ್ಲಿ ರಾಜ್ಯದಲ್ಲಿರುವ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗಳು ನಿಗದಿತ ಅವಧಿಯೊಳಗೆ ವರದಿ ನೀಡದ ಕಾರಣ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯದಾನ ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿದೆ ಎಂದು ಉಲ್ಲೇಖಿಸಿ, ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುವಂತೆ ರಿಜಿಸ್ಟ್ರಿಗೆ ಮನವಿ ಮಾಡಿತ್ತು. ಬಳಿಕ, ಸಿಜೆ ಸೂಚನೆ ಮೇರೆಗೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ನಾನು ದಪ್ಪ ಆದ್ರೂ ಪಂಚೆ ಬದಲಾಗಲ್ಲ: ಸದನದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ!
ಕ್ರಿಮಿನಲ್ ಪ್ರಕರಣಗಳಿಗೆ ತೊಂದರೆ: ಬೆಂಗಳೂರಿನ ಮಡಿವಾಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಕೇಂದ್ರ ಕಚೇರಿ, ದಾವಣಗೆರೆ, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು ಸೇರಿ ರಾಜ್ಯದಲ್ಲಿ ಒಟ್ಟು 6 ಲ್ಯಾಬ್‌ಗಳಿವೆ. ಇವುಗಳಲ್ಲಿ ಡಿಎನ್‌ಎ, ನಾರ್ಕೊಟಿಕ್, ಫೈರ್ ಆರ್ಮ್ಸ್, ದಾಖಲೆಗಳ ಪರೀಕ್ಷಾ ವಿಭಾಗ ಸೇರಿ 13 ವಿಭಾಗಗಳಿವೆ. ಆದರೆ, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆಯಿಂದಾಗಿ ಅನೇಕ ವಿಭಾಗಗಳು ಕೆಲಸವನ್ನೇ ಮಾಡುತ್ತಿಲ್ಲ. ರಾಜ್ಯದ ಎಲ್ಲ ಲ್ಯಾಬ್‌ಗಳಲ್ಲಿ 35,738 ಸ್ಯಾಂಪಲ್ ಗಳು ಪರೀಕ್ಷೆಗೊಳಪಡದೆ ಬಾಕಿ ಉಳಿದಿರುವ ಪರಿಣಾಮ 6,994 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯೂ ವಿಳಂಬವಾಗಿದೆ. ಸ್ಯಾಂಪಲ್ಗಳು ಬಂದಾಗ ವರದಿ ಕೊಡಲು ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ. ನಾರ್ಕೊಟಿಕ್ಸ್‌ಗೆ 1 ವರ್ಷ, ಮೊಬೈಲ್, ಕಂಪ್ಯೂಟರ್, ಆಡಿಯೋ, ವೀಡಿಯೋ, ಡಿಎನ್‌ಎ ಹಾಗೂ ದಾಖಲೆಗಳನ್ನು ಪರೀಕ್ಷಿಸಿ ವರದಿ ನೀಡಲು ಅಂದಾಜು ಒಂದೂವರೆ ವರ್ಷ ತೆಗೆದುಕೊಳ್ಳುತ್ತಿವೆ. ಇದರಿಂದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.