ಬೆಂಗಳೂರು : ಇನ್ನು ಮುಂದೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರು ಸರಣಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಅಗತ್ಯವಿಲ್ಲ. ನೇರವಾಗಿ ದೇವರ ದರ್ಶನ ಪಡೆಯಲು ರಾಜ್ಯ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.
ಬಸವನಗುಡಿ, ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, 65 ವರ್ಷ ಮೇಲ್ಪಟ್ಟವರು ಗುರುತಿನ ಚೀಟಿ ತೋರಿಸಿ ನೇರವಾಗಿ ದೇವರ ದರ್ಶನ ಪಡೆಯುವ ಅವಕಾಶ ನೀಡಲಾಗಿದೆ. ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ಚಾಮುಂಡಿ ಬೆಟ್ಟಕ್ಕೆ ಒಂದು ಲಕ್ಷ ಜನ ಹೋಗಿದ್ದಾರೆ. ಅದರಲ್ಲಿ ಹತ್ತು ಸಾವಿರ ಜನ ಹಿರಿಯ ನಾಗರಿಕರು ಇದ್ದರು. ಅವರೆಲ್ಲರೂ ಆಧಾರ್ ಕಾರ್ಡ್ ತೋರಿಸಿ ದೇವರ ದರ್ಶನ ಪಡೆದಿದ್ದಾರೆ ಎಂದಿದ್ದಾರೆ.
ಎ ಕ್ಯಾಟಗರಿಯ 205, ಬಿ ಕ್ಯಾಟಗರಿಯ 193 ದೇವಸ್ಥಾನಗಳು ಮುಜರಾಯಿ ಇಲಾಖೆಯಲ್ಲಿವೆ. ಸಿ ಕ್ಯಾಟಗರಿಯಲ್ಲಿ ಸುಮಾರು 3 ಸಾವಿರ ದೇವಸ್ಥಾನಗಳಿವೆ. ಎ ಹಾಗೂ ಬಿ ನಲ್ಲಿ ಹೆಚ್ಚಿನ ಜನ ಬರುತ್ತಾರೆ. 65 ವರ್ಷ ವಯಸ್ಸಿನ ನಾಗರಿಕರಿಗೆ ಆರೋಗ್ಯ ಸಮಸ್ಯೆ ಇರುತ್ತದೆ. ಹಾಗಾಗಿ ಅವರು ಸಾಲಿನಲ್ಲಿ ನಿಲ್ಲೋದಕ್ಕೆ ಆಗೋದಿಲ್ಲ. ದೇವಸ್ಥಾನದ ಅರ್ಚಕರು ಒಕ್ಕೂಟದಿಂದ ಬಂದು ಮನವಿ ಮಾಡಿದ್ದರು. ಹೀಗಾಗಿ ನಾವು ಈ ಅವಕಾಶ ಕಲ್ಪಿಸಲು ನಿರ್ಧರಿಸಿದ್ದೇವೆ. ದೇವಸ್ಥಾನಕ್ಕೆ ಹೋಗಿ ಬರುವ ಭಕ್ತರಿಗೆ ಸಂತೋಷ ಇರಬೇಕು. ನೀರು ಹಾಗೂ ಶೌಚಾಲಯದ ಸಮಸ್ಯೆ ಆಗದ ಹಾಗೆ ವ್ಯವಸ್ಥೆ ಕಲ್ಪಿಸಲು ತಿಳಿಸಿದ್ದೇನೆ ಎಂದು ಹೇಳಿದರು.
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಚಿವರು ಇವತ್ತೇ ವಿಶೇಷ ಪೂಜೆ ಸಲ್ಲಿಸಿಸುವ ಮೂಲಕ ಕಾರ್ಯಕ್ರಮ ಆರಂಭವಾಗಿರುವುದಕ್ಕೆ ಸಾಕ್ಷಿಯಾದರು. ಈ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾದಿವಂತರ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ 'ಎ' ಮತ್ತು 'ಬಿ ಶ್ರೇಣಿಯ ದೇವಾಲಯಗಳಲ್ಲಿ, 65 ವರ್ಷ ಮೇಲ್ಪಟ್ಟ ಇರುವ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ವಯಸ್ಸಿನ ಆಧಾರದ ಮೇಲೆ ಸರತಿಯ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹಿರಿಯ ನಾಗರೀಕರಿಗೆ ದೇವರ ದರ್ಶನಕ್ಕೆ, ಸರತಿ ಸಾಲಿನಲ್ಲಿ ನಿಂತುಕೊಳ್ಳುವುದು ಕಷ್ಟಕರವಾಗಿರುವುದರಿಂದ 65 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ, ಅವರಿಗೆ ನೀವು ದರ್ಶನಕ್ಕೆ ಅನಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಲಾಗಿದ್ದು, ದೇವಾಲಯದಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರಿಕರಿಗೆ ಎಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಲು ಸೂಚಿಸಲಾಗಿದೆ. ದೇವಾಲಯಗಳಲ್ಲಿ, ಹಿರಿಯ ನಾಗರೀಕರ ಸಹಾಯ ಕೇಂದ್ರವನ್ನು (Help desk) ಸ್ಥಾಪಿಸುವುದು, ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜನೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಬಕಾರಿ ಸಚಿವ ರಾಮಲಿಂಗಾರಡ್ಡಿ ಸೂಚಿಸಿದ್ದಾರೆ.
ಆನ್ ಲೈನ್ ಬುಕ್ಕಿಂಗ್ನಲ್ಲೂ ರಿಯಾಯಿತಿ: ಮುಂಚಿತವಾಗಿ ಕಾಯ್ದಿರಿಸುವ ಮೂಲಕ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೂ ಈ ವ್ಯವಸ್ಥೆ ಯನ್ನು ವಿಸ್ತರಿಸಲು ಸರ್ಕಾರ ಚಿಂತಿಸಿದೆ. ಈ ಹಿನ್ನಲೆಯಲ್ಲಿ ಆನ್ ಲೈನ್ ಬುಕ್ಕಿಂಗ್ ಮಾಡುವಾಗಲೇ ವಯಸ್ಸಾದವರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ನೇರ ದರ್ಶನ ವ್ಯವಸ್ಥೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ