ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆ ಕುರಿತಂತೆ ಹೆಚ್ಚಿನ ಮಾಹಿತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಕಲ್ಲಹಳ್ಳಿ ಗೈರು ಹಾಜರಾಗಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ ನಂತರ ನನಗೆ ಜೀವ ಬೆದರಿಕೆ ಕರೆಗಳು ಮತ್ತು ಮನೆ ಮುಂದೆ ಹೆದರಿಸುವ ಕೆಲಸ ನಡೆಯುತ್ತಿದೆ. ಭದ್ರತೆ ಕುರಿತಂತೆ ಈಗಾಗಲೇ ರಾಮನಗರ ಎಸ್ಪಿಗೆ ದೂರು ಸಲ್ಲಿಸಿದ್ದೇನೆ. ಹಾಗೆಯೇ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ. ನನಗೆ ಜೀವ ಬೆದರಿಕೆ ಕಾರಣ ಸೂಕ್ತ ಭದ್ರತೆ ನೀಡಬೇಕು. ಸೂಕ್ತ ಪೊಲೀಸ್ ಭದ್ರತೆ ನೀಡಿದ ನಂತರ ಮಾ.9ರಂದು ತನಿಖೆಗೆ ಹಾಜರಾಗುವುದಾಗಿ ಕಬ್ಬನ್ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ಮಾರುತಿಗೆ ದಿನೇಶ್ ಪತ್ರ ಬರೆದಿದ್ದಾರೆ.
ಓದಿ: ಸಾಹುಕಾರ್ ಸಿಡಿ ಪ್ರಕರಣ: ಸಂತ್ರಸ್ತೆ ಪತ್ತೆಗಾಗಿ ನಗರದ ಪಿಜಿಗಳಲ್ಲಿ ತಲಾಶ್ ನಡೆಸುತ್ತಿರುವ ಪೊಲೀಸರು
ದೂರು ನೀಡಿ ಎರಡು ದಿನ ಕಳೆದರೂ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಇದಕ್ಕೆ ಪ್ರಮುಖ ಕಾರಣ ದೂರಿನಲ್ಲಿರುವ ಅಪೂರ್ಣ ಮಾಹಿತಿ ಹಾಗೂ ಸಂತ್ರಸ್ತೆ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ತನಿಖೆಗೆ ಹಿನ್ನೆಡೆಯಾಗಿದೆ ಎನ್ನಲಾಗ್ತಿದೆ. ಈ ದಿಸೆಯಲ್ಲಿ ದಿನೇಶ್ ಕಲ್ಲಹಳ್ಳಿಗೆ ಸಂತ್ರಸ್ತೆ ಹಾಗೂ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿದೆ. ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿನೇಶ್ ಹಾಜರಾಗಬೇಕಿತ್ತು.