ಬೆಂಗಳೂರು: ಐಟಿ, ಇಡಿ, ಸಿಬಿಐ ಬಿಜೆಪಿಯ ಪ್ರೈವೇಟ್ ಡಿಪಾರ್ಟ್ಮೆಂಟ್ ಆಗಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಮಂತ್ರಿಮಾಲ್ ಸಮೀಪ ಇರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಜೆಪಿಗೆ ಅಧಿಕಾರಿಗಳಿಂದಲೇ ರಕ್ಷಣೆ, ಒಬ್ಬೊಬ್ಬ ಅಭ್ಯರ್ಥಿಗೆ 10 ಕೋಟಿ ರೂ.- ದಿನೇಶ್ ಗುಂಡೂರಾವ್.. ಬಿಜೆಪಿಗೆ ಅಧಿಕಾರಿಗಳು ರಕ್ಷಣೆ ಕೊಡ್ತಾರೆ. ಎಲ್ಲಿಲ್ಲಿ ಹಣ ಇಡಬೇಕು, ಎಲ್ಲಿಗೆ ಕಳಿಸಬೇಕು ಅನ್ನೋದು ಅವರಿಗೆ ಗೊತ್ತಿದೆ. ಒಬ್ಬೊಬ್ಬ ಅಭ್ಯರ್ಥಿಗೆ 10 ಕೋಟಿ ಹಣವನ್ನು ಬಿಜೆಪಿ ಕೊಡ್ತಾ ಇದೆ. ಇದು ನಮಗಿರುವ ಮಾಹಿತಿ. ಸರ್ಕಾರವೇ ಹಣ ಸಾಗಿಸುತ್ತಿದೆ. ಐಟಿ ಅಧಿಕಾರಿಗಳು ರಕ್ಷಣೆ ಮಾಡ್ತಾ ಇದ್ದಾರೆ ಅವರನ್ನು. ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಬಹುದು. ಐಟಿ ಅಧಿಕಾರಿಗಳೇ ಹಣ ತಲುಪಿಸಬಹುದು ಎಂದು ಗುಂಡೂರಾವ್ ಆರೋಪಿಸಿದರು.
ಐಟಿ, ಇಡಿ ಅಧಿಕಾರಿಗಳ ಭಯ ಕಾಂಗ್ರೆಸ್ಗೆ ಯಾಕೆ ಎಂಬ ಪ್ರಶ್ನೆಯನ್ನು ಸಿಎಂ ಕೇಳಿದ್ದಾರೆ. ಭಯ ನಮಗಿಲ್ಲ, 2018, 2019ರ ಎಲೆಕ್ಷನ್ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಆಗ ಕಾಂಗ್ರೆಸ್- ಜೆಡಿಎಸ್ ನವರು ಮಾತ್ರ ಐಟಿ, ಇಡಿ ಕಣ್ಣಿಗೆ ಕಾಣಸಿದ್ದು. ಈ ಬಾರಿಯೂ ಅದೇ ರೀತಿ ಮಾಡ್ತಾರೆ. ಸೋಲುವ ಭೀತಿಯಿಂದ ಹೇಗಾದರೂ ತೊಂದರೆ ಕೊಡ್ತಾರೆ. ಅಭ್ಯರ್ಥಿ ಮೇಲೆ ರೇಡ್ ಮಾಡ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಅಲ್ಲಿ ಏನಾದರೂ ಸಿಗುತ್ತೋ, ಬಿಡುತ್ತೋ ಅಭ್ಯರ್ಥಿಯ ಸಮಯ ಹೋಯಿತಾ. ಓಡಾಡೋದು, ಕೂರಿಸುವುದು, ಸಮಯ ವ್ಯರ್ಥ ಮಾಡೋದು. ವಾತಾವರಣ ಕೆಡಿಸುವುದು, ರೇಡ್ ಆದಾಗ ಸಿಗುವುದು ನಿಜಾನ ಸುಳ್ಳೋ ಆಮೇಲೆ ನೋಡಿಕೊಳ್ಳೋಣ. ಎಲೆಕ್ಷನ್ ಮುಗಿದ ಮೇಲೆ ನೋಡಿಕೊಳ್ಳೋಣ ಎಂದು ರೇಡ್ ಮಾಡಿಸುವುದು. ಇದೊಂದು ಎಲೆಕ್ಷನ್ ತಂತ್ರಗಾರಿಕೆ. ಮೊದಲು ಬಿಜೆಪಿಯ ಹಿತೈಷಿಗಳ ಮೇಲೆ ರೇಡ್ ಮಾಡಲಿ, ಆಮೇಲೆ ಮಾತಾಡಲಿ. ನಮಗೆ ಭಯ ಅಲ್ಲ, ಇದರಿಂದ ತೊಂದರೆ, ಕಿರುಕುಳ, ಕೆಟ್ಟ ಹೆಸರು ಬರುತ್ತದೆ ಎಂದು ಕೆಪಿಸಿಸಿ ಮಾಜಿ ಹೇಳಿದರು.
ಕಾಂಗ್ರೆಸ್ನಲ್ಲಿ ಸಿಎಂ ಗಾದಿಗೆ ಫೈಟ್ ವಿಚಾರ ಕುರಿತು ಮಾತನಾಡಿದ ಅವರು, ಪೈಪೋಟಿ ಇದ್ದೇ ಇರುತ್ತದೆ, ಪೈಪೋಟಿ ಇದ್ರೆ ತಾನೇ ರಾಜಕೀಯ. ಯಾಕೆ ಪೈಪೋಟಿ ಇರಬಾರದು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ, ಸಚಿವ, ಎಂಎಲ್ಎ ಟಿಕೆಟ್ ತೊಗೊಳೊಕೆ ಪೈಪೋಟಿ ಇರುತ್ತದೆ. ಆರೋಗ್ಯಕರ ಸ್ಪರ್ಧೆ ಇರಬೇಕು ಅಷ್ಟೇ. ನಮ್ಮಲ್ಲಿ ಆರೋಗ್ಯಕರ ಸ್ಪರ್ಧೆ ಇದೆ. ಸಿದ್ದರಾಮಯ್ಯ, ಡಿಕೆಶಿ, ಎಂಬಿ ಪಾಟೀಲ್, ಪರಮೇಶ್ವರ್, ಹೆಚ್ ಕೆ ಪಾಟೀಲ್ಗೆ ಆಸೆ ಇದೆ ಎಂದರು. ನಿಮಗೆ ಇದೆಯಾ ಎಂಬ ಪ್ರಶ್ನೆಗೆ, ಯಾರಿಗಾದರೂ ಇರಬಹುದು, ಮೊದಲು ಫಲಿತಾಂಶ ಬರಲಿ. ವೀಕ್ಷಕರು ಬರ್ತಾರೆ, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಆರ್ಎಸ್ಎಸ್ನವರು ಬಿಜೆಪಿ ಟಿಕೆಟ್ ತೀರ್ಮಾನಿಸುತ್ತಾರೆ: ದಿನೇಶ್.. ಪಟ್ಟಿ ಬಿಡುಗಡೆ ವಿಳಂಬ ವಿಚಾರ ಮಾತನಾಡಿ, ಹೈಕಮಾಂಡ್ ತೀರ್ಮಾನ ಮಾಡಬೇಕು. ಸುಮ್ಮನೆ ಕಾರ್ಯಕರ್ತ ಅಭಿಪ್ರಾಯ ಅಂತ ಮೊನ್ನೆ ಡ್ರಾಮಾ ಮಾಡಿದ್ದಾರೆ. ಆರ್ಎಸ್ಎಸ್ನವರು ಕುಳಿತು ಬಿಜೆಪಿ ಟಿಕೆಟ್ ತೀರ್ಮಾನ ಮಾಡ್ತಾರೆ ಎಂದು ಟೀಕಿಸಿದರು.
ಜೆಡಿಎಸ್ ಕಿಂಗೇ ಆಗಬಹುದು ಹಿಂದೆ ಎಲ್ಲಾ ಆಗಿದ್ದಾರಲ್ಲಾ- ದಿನೇಶ್.. ನಾವೇ ಕಿಂಗ್ ಆಗೋದು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅದನ್ನು ಹೇಳಬೇಕು. ಜನರಿಗೆ ರಿಯಾಲಿಟಿ ಗೊತ್ತು. ಸಾಮಾನ್ಯ ಜನರಿಗೆ ಕೇಳಿ ಜೆಡಿಎಸ್ ಎಷ್ಟು ಬರಬಹುದು ಅಂತ. ಅವರು ಕೂಡ 20-35 ಬರಬಹುದು ಎಂದು ಹೇಳ್ತಾರೆ. ಯಾರಿಗೂ ಬಹುಮತ ಬರಬಾರದು, ತಾವು ಕಿಂಗ್ ಮೇಕರ್ ಆಗಬೇಕು ಎಂಬುದಿದೆ. ಕಿಂಗೇ ಆಗಬಹುದು ನೋಡೋಣ ಹಿಂದೆಯಲ್ಲ ಆಗಿದ್ದರಲ್ಲಾ. 16 ಜನ ಎಂಪಿ ಇಡಕೊಂಡು ಪಿಎಂ ಆಗಿದ್ದರು. ರಾಜಕೀಯ ಅದೃಷ್ಟ ಅದು. ಈ ಬಾರಿ ಕಾಂಗ್ರೆಸ್ಗೆ ಬಹುಮತ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್ ಕಗ್ಗಂಟಿನ ವಿಚಾರ ಮಾತನಾಡಿ, ಕಗ್ಗಂಟು ಏನೂ ಇಲ್ಲ, ನಿನ್ನೆ 50% ರಷ್ಟು ಚರ್ಚೆ ಆಗಿದೆ. ಇವತ್ತು 50% ಚರ್ಚೆ ಆಗಲಿದೆ. ಬಹುತೇಕ ಎಲ್ಲಾ ತೀರ್ಮಾನ ಮಾಡ್ತಾರೆ. ಕೆಲವು ಕಡೆ ಗೊಂದಲ ಇದ್ದರೆ 4-5 ಕಡೆ ಉಳಿಯಬಹುದು. ಇದೆಲ್ಲವೂ ರಾಜಕೀಯ ತಾನೇ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ಪರ ನಾನು ನಿಲ್ಲುತ್ತೇನೆ, ಆದರೆ ಪಕ್ಷ ಸೇರಲ್ಲ: ಸುದೀಪ್ ಸ್ಪಷ್ಟನೆ