ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಜೆಯ ನಂತರ ಪ್ರಚಾರ ನಡೆಸಿದರು.
ಒಂದಿಷ್ಟು ಮುಖಂಡರ ಕಾಂಗ್ರೆಸ್ ಸೇರ್ಪಡೆ, ಸಾರ್ವಜನಿಕ ಸಭೆ, ಮುಖಂಡರ ಜೊತೆಗೂಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಸಂಬಂಧ ಚರ್ಚೆ ಇತ್ಯಾದಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡರು. ಇದರ ನಡುವೆಯೂ ಕೆಲ ಅಂಗಡಿ ವ್ಯಾಪಾರಿಗಳು ಹಾಗೂ ಮಾಲೀಕರ ಸಂಕಷ್ಟವನ್ನು ವಿಚಾರಿಸಿದರು. ಕ್ಷೇತ್ರವ್ಯಾಪ್ತಿಯಲ್ಲಿ ಕಾರ್ಯಕರ್ತರಿಗೆ ಆಗುತ್ತಿರುವ ಸಮಸ್ಯೆ, ದಾಖಲಾಗಿರುವ ದೂರುಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ಎದುರಾಗಿರುವ ಆತಂಕಗಳ ಕುರಿತು ಚರ್ಚಿಸಿದರು. ಇದಕ್ಕೆ ಮುಂದೆ ಕೈಗೊಳ್ಳಬಹುದಾದ ಪರಿಹಾರ ಮಾರ್ಗಗಳ ಕುರಿತು ಸಹ ಪಕ್ಷದ ನಾಯಕರ ಜೊತೆ ಚರ್ಚಿಸಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರ ಸಂದರ್ಭದಲ್ಲಿ ನಾಗರಬಾವಿಯ ಮಡಿವಾಳರ ಅಂಗಡಿಗೆ ಭಾನುವಾರ ಭೇಟಿ ನೀಡಿ, ಅಂಗಡಿ ಮಾಲೀಕನ ಅಹವಾಲು ಆಲಿಸಿದರು. ಬಿಜೆಪಿ ಸರ್ಕಾರದಿಂದ ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಒಂದು ಪೈಸೆ ಕೂಡ ನೆರವು ಸಿಕ್ಕಿಲ್ಲ, ಸರ್ಕಾರದ ಘೋಷಣೆ ಬರೀ ಘೋಷಣೆಯಾಗಿ ಉಳಿಯಿತು ಎಂದು ಅಂಗಡಿ ಮಾಲೀಕ ತಮ್ಮ ನೋವು ತೋಡಿಕೊಂಡರು.
ಸಂಜೆ ಲಗ್ಗೆರೆಯ ಲಕ್ಷ್ಮೀ ದೇವಿನಗರದಲ್ಲಿ ಪ್ರಚಾರ ಸಭೆ ನಡೆಸಿದರು. ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬೆಟ್ಟಸ್ವಾಮಿಗೌಡ, ಸ್ಥಳೀಯ ಕಾರ್ಪೊರೇಟರ್ ವಿಜಯಕುಮಾರ್, ಮುಖಂಡ ಹನುಮಂತರಾಯಪ್ಪ ಮತ್ತಿತರರು ಭಾಗವಹಿಸಿದ್ದರು. ಪಕ್ಷದ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪರನ್ನು ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಲ್ಲದೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೂ ಕೋರಿಕೊಂಡರು.