ಬೆಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸುವಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕರ್ನಾಟಕದ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ದಿಗ್ವಿಜಯ ಸಿಂಗ್ ಬಂಧನ ವಿರೋಧಿಸಿ, ರಾಜ್ಯಸಭಾ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಎಲ್.ಹನುಮಂತಯ್ಯ ಮತ್ತು ಜಿ.ಸಿ. ಚಂದ್ರಶೇಖರ್ ಜಂಟಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಹೇಳಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ದೇಶದ ಯಾವುದೇ ರಾಜ್ಯಕ್ಕೆ ಹೋಗಲು ದಿಗ್ವಿಜಯ ಸಿಂಗ್ ಅವರಿಗೆ ಎಲ್ಲ ರೀತಿಯ ಹಕ್ಕುಗಳಿವೆ ಎಂದರು.
ಸಿಂಗ್ ಬೆಂಗಳೂರಿಗೆ ಭೇಟಿ ನೀಡುವುದು ಕಾನೂನುಬಾಹಿರವೇ? ಅದಕ್ಕೆ ಸಂಬಂಧಿಸಿದಂತೆ ಅವರಿಗೆ ಯಾವುದೇ ಭಯೋತ್ಪಾದಕ ಸಂಪರ್ಕವಿಲ್ಲ ಮತ್ತು ಅವರ ವಿರುದ್ಧ ಪ್ರಕರಣವಿಲ್ಲ. ಅವರು ಮಧ್ಯಪ್ರದೇಶದ ಮಾಜಿ ಸಿಎಂ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದರಾಗಿದ್ದಾರೆ. ಅವರು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಏಕೆ ಭೇಟಿ ಮಾಡಬಾರದು? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ದಿಗ್ವಿಜಯ ಸಿಂಗ್ ಅವರನ್ನು ಬಂಧಿಸಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ನಿರ್ದೇಶನದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ದಿಗ್ವಿಜಯ ಸಿಂಗ್ರನ್ನು ಬಂಧನ ಮಾಡಿರುವುದು ಖಂಡನೀಯ : ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ
ದಿಗ್ವಿಜಯ ಸಿಂಗ್ರನ್ನು ಬಂಧನ ಮಾಡಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧಿ ಕ್ರಮ. ದಿಗ್ವಿಜಯ್ ಸಿಂಗ್ ಹೋಗಿರುವುದು ಕಾಂಗ್ರೆಸ್ ಶಾಸಕರನ್ನು ಭೇಟಿಯಾಗೋಕೆ, ಬಿಜೆಪಿ ಶಾಸಕರನ್ನಲ್ಲ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಕೂಡಿ ಹಾಕಿಕೊಂಡಿದ್ದಾರೆ. ದಿಗ್ವಿಜಯ್ ಸಿಂಗ್ ಬಂಧನ ವಿರೋಧಿಸಿ ನಾವು ಪ್ರತಿಭಟನೆ ಮಾಡಿದ್ದಕ್ಕೆ ರಾಜ್ಯಸಭಾ ಕಲಾಪವನ್ನ ಮುಂದೂಡಲಾಯಿತು. ದಿಗ್ವಿಜಯ್ ಸಿಂಗ್ ಬಿಡುಗಡೆಯಾಗುವ ವರೆಗೂ ನಾವು ರಾಜ್ಯಸಭಾ ಕಲಾಪ ನಡೆಯಲು ಬಿಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಎಚ್ಚರಿಕೆ ನೀಡಿದರು.