ಬೆಂಗಳೂರು: ಮಧ್ಯಪ್ರದೇಶದ ಅತೃಪ್ತ ಕಾಂಗ್ರೆಸ್ ಶಾಸಕರು ನಗರದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಮಾಧ್ಯಮಗೋಷ್ಟಿ ನಡೆಸಿ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿರುವ ಆಡಿಯೋ ದಾಖಲೆ ಇದೆ ಎಂದು ಹೇಳಿದ್ದಾರೆ.
'ಕರ್ನಾಟಕ ಡಿಜಿಪಿ ಬುಧವಾರ ನಮಗೆ ಭರವಸೆ ನೀಡಿದ್ದರು, ಲಿಖಿತ ರೂಪದಲ್ಲಿ ಶಾಸಕರ ಭೇಟಿಗೆ ಮನವಿ ಸಲ್ಲಿಸುವಂತೆ ಹೇಳಿದ್ದರು. ಅದರ ಪ್ರಕಾರ ನಾವು ಇಂದು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದೇವೆ. ನಾನು ರೆಸಾರ್ಟ್ ನಲ್ಲಿರುವ 18 ಶಾಸಕರಿಗೆ ಪತ್ರ ಬರೆದಿದ್ದೇನೆ, ಅದನ್ನು ಡಿಜಿಪಿಯವರಿಗೆ ನೀಡಿದ್ದೇನೆ. ನನ್ನ ಪತ್ರವನ್ನು ಡಿಜಿಪಿ ಪ್ರವೀಣ್ ಸೂದ್ ಅವರು ನಮ್ಮ ಎಲ್ಲ ಶಾಸಕರಿಗೆ ತಲುಪಿಸುವಂತೆ ಕೋರಿದ್ದೇನೆ. ಅದೂ ಕೂಡ ಸಾಧ್ಯವಿಲ್ಲ ಅಂತ ಡಿಜಿಪಿ ಪ್ರವೀಣ್ ಸೂದ್ ನಿರಾಕರಿಸಿದ್ದಾರೆ. ಹೀಗಾಗಿ ಎಲ್ಲ ಪತ್ರಗಳನ್ನು ಕೋರಿಯರ್ ಮೂಲಕ ರಮಡಾ ಹೋಟೆಲ್ ನಲ್ಲಿರುವ ಶಾಸಕರಿಗೆ ನೀಡಿದ್ದೇನೆ' ಎಂದರು.
ಈ ವಿಷಯ ಕುರಿತಾಗಿ ಸಿಎಂ ಯಡಿಯೂರಪ್ಪ ಅವರನ್ನು ಕೂಡ ಭೇಟಿಗೆ ಪ್ರಯತ್ನ ಮಾಡಿದ್ದೇನೆ, ಬಿಜೆಪಿ ಈ ರೀತಿಯ ಪವರ್ ಗೇಮ್ ಅನ್ನು ರಚನೆ ಮಾಡುತ್ತಿದೆ. ಮೋದಿ, ಅಮಿತ್ ಶಾ ಆಪರೇಷನ್ ಮನಿ ಬ್ಯಾಗ್ ಹಿಂದಿದ್ದಾರೆ. ಕರ್ನಾಟಕದಲ್ಲಿ ಯಾವ ರೀತಿ ಆಪರೇಷನ್ ಮನಿ ಬ್ಯಾಗ್ ಮಾಡಿದರೋ ಅದೇ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಜೋತಿರಾದ್ಯ ಸಿಂಧಿಯಾ ಕುರಿತು ಮಾತನಾಡಿದ ಸಿಂಗ್, ಕಾಂಗ್ರೆಸ್ ಸಿಂಧಿಯಾಗೆ ಎಲ್ಲಾ ಅವಕಾಶ ನೀಡಿತ್ತು, ಅವರಿಗೆ ಅವಕಾಶವನ್ನ ಬಿಜೆಪಿ ಕೊಟ್ಟಿತ್ತಾ? ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ನಾವು ದೇಶದಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು. ಆದ್ರೆ ನಮ್ಮ ಶಾಸಕರ ಭೇಟಿಗೆ ದಿಗ್ವಿಜಯ್ ಸಿಂಗ್ಗೆ ಅವಕಾಶ ನೀಡಿಲ್ಲ. ಅವರ ಪ್ರಜಾಪ್ರಭುತ್ವ ಹಕ್ಕನ್ನೇ ಪೊಲೀಸರು ಮೊಟಕುಗೊಳಿಸಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದರು.