ಬೆಂಗಳೂರು: ಕೊರೊನಾ ವೈರಸ್ ಎಂಟ್ರಿ ಕೊಟ್ಟ ಮೇಲೆ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರಾದಡುತ್ತಿರುವುದು ಗೊತ್ತೇ ಇದೆ. ಮೊದ ಮೊದಲು ಕೋವಿಡ್ ರೋಗಿಗಳಿಗೆ ಬೆಡ್ ಇಲ್ಲ ಅನ್ನುವಾಗಲೇ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕೋವಿಡ್ ಸೆಂಟರ್ಗಳ ವ್ಯವಸ್ಥೆ ಮಾಡ್ತು. ಇದೀಗ ನಾನ್ ಕೋವಿಡ್ ರೋಗಿಗಳು ಬಂದರೂ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ, ಆಸ್ಪತ್ರೆಗಳಿಗೆ ತಿರುಗಾಡುವ ಪರಿಸ್ಥಿತಿ ಉದ್ಭವಿಸಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲೊಂದು ಪ್ರಕರಣ ನಡೆದಿದೆ. ಶಿವಮೊಗ್ಗದಿಂದ ಲಕ್ಷ್ಮಮ್ಮ ಎಂಬ ವೃದ್ಧೆಯನ್ನ ಅನಾರೋಗ್ಯ ಕಾರಣದಿಂದ ಬೆಂಗಳೂರಿಗೆ ನಿನ್ನೆ ಸಂಜೆ ಕರೆ ತರಲಾಗಿದೆ. ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಬಳಿಕ ಸಂಜಯ್ ಗಾಂಧಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.
ಅಲ್ಲಿಂದ ಆಂಬ್ಯುಲೆನ್ಸ್ನಲ್ಲಿ ಬಂದವರಿಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಅಲ್ಲಿಂದ ಜಯದೇವ ಆಸ್ಪತ್ರೆಗೆ ಹೋದಾಗ ಅಲ್ಲಿ ಕೆಲವು ಪರೀಕ್ಷೆ ನಡೆಸಿ, ಅಲ್ಲಿನ ವೈದ್ಯರು ಮತ್ತೆ ಸಂಜಯ್ ಗಾಂಧಿ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ.
ಆದರೆ ನಿನ್ನೆ ಸಂಜೆ 6 ಗಂಟೆಯಿಂದ ಕಾದರೂ ಕೂಡ ಯಾವೊಬ್ಬ ವೈದ್ಯ, ಸಿಬ್ಬಂದಿ ಕ್ಯಾರೆ ಮಾಡಲಿಲ್ಲ ಅಂತ ಕುಟುಂಬದವರು ಬೇಸರ ವ್ಯಕ್ತಪಡಿಸಿದರು. ಕೊನೆಗೆ ಹಲವರ ಸಂಪರ್ಕ ಮಾಡಿದ ಮೇಲೆ ಬರೋಬ್ಬರಿ ಮೂರು ಗಂಟೆಗೂ ಹೆಚ್ಚಿನ ಸಮಯ ಕಾದ ಬಳಿಕ ದಾಖಲು ಮಾಡಿಕೊಂಡಿದ್ದಾರೆ. ಇಂತಹ ಕಷ್ಟದ ಸಮಯದಲ್ಲೇ ಆಸ್ಪತ್ರೆಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಇದ್ದರೆ ಹೇಗೆ ಎಂದು ಕುಟುಂಬದವರು ಪ್ರಶ್ನೆ ಮಾಡಿದ್ದಾರೆ.