ಬೆಂಗಳೂರು: ಇದೇ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಲು ಮುಂದಾಗಿರುವ ಯುವ ಜನತೆಯಲ್ಲಿ ಮತದಾನದ ಬಗ್ಗೆ ವಿಭಿನ್ನವಾಗಿ ಅರಿವು ಮೂಡಿಸಲು ನಗರದ ಹಲಸೂರಿನಲ್ಲಿರುವ ಚರಣ್ ಪದವಿ ಕಾಲೇಜು ಮುಂದಾಗಿದೆ.
18 ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಈ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸುಮಾರು 20ಕ್ಕೂ ಹೆಚ್ಚು ಕಾಲೇಜುಗಳಿಂದ 18 ರಿಂದ 21 ವರ್ಷದೊಳಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚರಣ್ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ವಿನಯ್, ಇಂದಿನ ಯುವ ಜನಾಂಗಕ್ಕೆ ಮತದಾನದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ, ವಿದ್ಯಾರ್ಥಿಗಳ ಆಸಕ್ತಿಯಾದ ಕ್ರೀಡೆಯೊಂದಿಗೆ ಮತದಾನದ ದಿನದಂದು ಮತ ಚಲಾಯಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ, ಈ ಕಾರ್ಯಕ್ರಮ ಆಯೋಜಿಸಲಾಯಿತು ಎಂದರು.
ಕ್ರಿಕೆಟ್ ಪಂದ್ಯಾವಳಿಗೂ ಮೊದಲು ಮೈಸೂರು ರಸ್ತೆ ಹಾಗೂ ಎಂಜಿ ರಸ್ತೆಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಜಾಥಾ ನಡೆಸಿದರು. ಜಾಥಾದಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.