ಬೆಂಗಳೂರು: ಉಪಸಭಾಪತಿ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರುವುದು ನೋವು ತಂದಿದೆ. ಅವರು ಸಭ್ಯ ರಾಜಕಾರಣಿ. ಯಾರಿಗೂ ನೋವು ಬಯಸಿದವರಲ್ಲ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡೆತ್ನೋಟ್ನಲ್ಲಿ ಅವರು ಕೆಲವೊಂದು ವಿಷಯ ಬರೆದಿದ್ದಾರೆ. ಮೇಲ್ಮನೆ ಗದ್ದಲದ ಬಗ್ಗೆ ನೋವು ಕಂಡಿದ್ದರು. ಅವರು ಇಂತಹ ಕೆಲಸ ಮಾಡಿಕೊಳ್ಳಬಾರದಿತ್ತು. ಸೂಕ್ಷ್ಮ ಮನಸ್ಥಿತಿಯಿದ್ದರೂ ಎಲ್ಲವನ್ನೂ ಜಯಿಸಬೇಕು ಎಂದರು.
ಡಿ.15 ರಂದು ಪರಿಷತ್ ಕಲಾಪದಲ್ಲಿ ನಡೆದ ಘಟನೆ ನನಗೆ ಬೇಸರ ತರಿಸಿದೆ ಅಂತ ಡೆತ್ನೋಟ್ನಲ್ಲಿ ಬರೆದಿರುವ ಬಗ್ಗೆ ಮಾಹಿತಿ ಇದೆ. ಸಭಾಪತಿ ಸ್ಥಾನದಲ್ಲಿ ತಾವೇ ಕೂತಿದ್ದು ಸಂಘರ್ಷಕ್ಕೆ ಕಾರಣವೆಂಬುದು ಅವರ ನೋವಾಗಿಬಹುದು. ಹಾಗಾಗಿ ಅವರು ಇಂತಹ ಕೆಲಸ ಮಾಡಿಕೊಂಡಿರಬಹುದು.
ಅವರು ಶಾಸಕರಾಗಿ, ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರಾಜಕಾರಣದಲ್ಲಿ ಕೆಲವು ಘಟನೆಗಳು ನಡೆಯುತ್ತವೆ. ಎಲ್ಲವನ್ನೂ ಎದುರಿಸಲು ನಾವು ಸಿದ್ಧರಿರಬೇಕು. ಅವರು ಈ ರೀತಿ ಮಾಡಿಕೊಂಡಿದ್ದು ನಮಗೆ ಬೇಸರ ತರಿಸಿದೆ. ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದರು.