ಬೆಂಗಳೂರು: ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸಂಬಂಧಿ ಸಿದ್ದಾರ್ಥ್ ನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ತಿರುಪತಿ ಮೂಲದ ವಿನೋದ್ ಪೊಲೀಸರ ವಶದಲ್ಲಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಅಮೃತಹಳ್ಳಿ ಠಾಣೆಯ ವಿಶೇಷ ತಂಡ ನೆಲ್ಲೂರಿನ ನಲ್ಲಮಲ್ಲ ಅರಣ್ಯಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ ಮಾಡಲು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಳೆ ಸ್ಥಳೀಯ ತಹಶೀಲ್ದಾರ್ ಹಾಗೂ ವೈದ್ಯರ ಅನುಮತಿ ಪಡೆದ ಬಳಿಕ ಹೂಳಿರುವ ಶವ ಹೊರ ತೆಗೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿದ್ದು, ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಕೊಲೆ ಹಿಂದೆ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವೈಷಮ್ಯ ಸೇರಿದಂತೆ ಎಲ್ಲ ರೀತಿಯ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಅಮೆರಿಕದಲ್ಲಿ ವ್ಯಾಸಂಗ ಮಾಡಿದ್ದ 28 ವರ್ಷದ ಸಿದ್ದಾರ್ಥ್ ಅಮೃತಹಳ್ಳಿಯ ದಾಸರಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ಜ.19 ರಂದು ತಂದೆ ದೇವೇಂದರ್ ಸಿಂಗ್ ಕೊನೆ ಬಾರಿ ಮಾಡಿದ ಮೆಸೇಜ್ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ ವಾಟ್ಸ್ಆ್ಯಪ್ ಮಾಡಿದ್ದರು. ಅನಂತರ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಎರಡು ಮೂರು ದಿನಗಳ ಕಳೆದರೂ ಮಗ ಅಮೆರಿಕಕ್ಕೆ ಹೋಗದೆ, ಮನೆಗೂ ಬಾರದೇ ನಾಪತ್ತೆಯಾಗಿರುವುದನ್ನು ಕಂಡ ಪೋಷಕರು ಆತಂಕಗೊಂಡು ಜ.25ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಓದಿ: ಬಜೆಟ್ನಿಂದ ಬೀಳಲಿದ್ಯಾ ಇನ್ನಷ್ಟು ಹೊರೆ..ಏನಂದ್ರು ಜನತೆ..? ವಾಕ್ ಥ್ರೂ
ಕೂಡಲೇ ಕಾರ್ಯಪ್ರವೃತ್ತರಾದ ವಿಶೇಷ ತಂಡ ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಲ್ಲೂರು ಅರಣ್ಯ ಪ್ರದೇಶದಲ್ಲಿ ಶವ ಹೂತು ಹಾಕಿರುವುದಾಗಿ ಈತ ತನಿಖೆ ವೇಳೆ ಮಾಹಿತಿ ನೀಡಿದ್ದಾನೆ. ಕೊಲೆ ಯಾವ ಕಾರಣಕ್ಕಾಗಿ ಮಾಡಿದ್ದಾರೆ, ವಶಕ್ಕೆ ಪಡೆದುಕೊಂಡ ಆರೋಪಿ ಪಾತ್ರ ಹಾಗೂ ಯಾವ ರೀತಿಯಲ್ಲಿ ಸಿದ್ದಾರ್ಥ್ ನನ್ನು ಹತ್ಯೆಗೈಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.