ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಹಿರಿಯ ಅಧಿಕಾರಿಗಳು ಇರುವ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾನ್ಸ್‌ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಹೀಗಾಗಿ ಡಿಜಿ ಕಚೇರಿಯ ಆವರಣದ ಹೊರಗಡೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಿಟ್ಟು ಇತರರಿಗೆ ಒಳ ಬರುವ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹಾಗೆಯೇ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕಕ್ಕೆ ಒಳಗಾಗಬಾರದೆಂದು ಕಟ್ಟಡ ಹಾಗೂ ಆವರಣವನ್ನ ಪೂರ್ತಿ ಸ್ಯಾನಿಟೈಸ್ ಮಾಡಲಾಗಿದೆ.
ಕಚೇರಿಯ ಮಾಹಿತಿ ಪ್ರಕಾರ, ಸೋಂಕಿತ ಕಾನ್ಸ್‌ಟೆಬಲ್ ನೃಪತುಂಗ ರಸ್ತೆಯ ಪ್ರಧಾನ ಕಚೇರಿಯ ಗೇಟ್ ಬಳಿ ಭದ್ರತೆ ಕಾರ್ಯ ಹಾಗೂ ಹೊರಗಡೆ ಕೆಲಸ ನಿರ್ವಹಣೆ ಮಾಡ್ತಿದ್ದ ಕಾರಣ, ಪ್ರಧಾನ ಕಚೇರಿಯಲ್ಲಿ ಕೆಲಸದ ನಿರ್ವಹಣೆಗೆ ಹೋಗಿರಲಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ಲಕ್ಷಣ ಕಂಡು ಬಂದ ಕಾರಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿದೆ. ಸದ್ಯ ಪೇದೆ ವಾಸವಿದ್ದ ಶಿವಾಜಿನಗರ ವಸತಿಗೃಹವನ್ನ ಕೂಡ ಸ್ಯಾನಿಟೈಸ್ ಮಾಡಿ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.