ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಶಿವಗಂಗೆ ಬೆಟ್ಟವನ್ನು ಎರಡು ದಿನಗಳ ಕಾಲ ಹತ್ತುವುದು ಮತ್ತು ಇಳಿಯುವುದನ್ನು ನಿಷೇಧಿಸಿ ತಹಶೀಲ್ದಾರ್ ಕೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಹೊಸ ವರ್ಷಾಚರಣೆಯಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಬೆಟ್ಟದಿಂದ ಆಯತಪ್ಪಿ ಬಿದ್ದು ಸಾವನಪ್ಪಿರುವ ಹಿನ್ನೆಲೆ ಹಾಗೂ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನೀರಿಕ್ಷೆ ಇದೆ. ಹಾಗಾಗಿ, ದಿನಾಂಕ 14 ಮತ್ತು 15 ರಂದು ತಹಶೀಲ್ದಾರ್ ಅವರು ಶಿವಗಂಗೆ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.
ರಜಾ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಬೆಟ್ಟದ ಮೇಲೆ ಕಿರಿದಾದ ಜಾಗ ಇರುವುದರಿಂದ ಹೆಚ್ಚಿನ ಜನ ಬಂದಾಗ ತೊಂದರೆಯಾಗಬಹುದು. ಸಾರ್ವಜನಿಕ ಹಿತದೃಷ್ಟಿಯಿಂದ ದಾಬಸ್ ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ರವಿ ಅವರ ವರದಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೆಲಮಂಗಲ ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದ್ದಾರೆ. ಸಂಕ್ರಾಂತಿ ಹಬ್ಬ ಇರುವುದರಿಂದ ತಹಶೀಲ್ದಾರ್ ಆದೇಶಕ್ಕೆ ಜನರು ಹಾಗೂ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
![order](https://etvbharatimages.akamaized.net/etvbharat/prod-images/kn-bng-01-shivagange-av-ka10057_14012023083432_1401f_1673665472_840.jpg)
ಇದನ್ನೂ ಓದಿ: ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ತುತ್ತತುದಿಯಲ್ಲಿ ಬೆಳಗಿದ ಜ್ಯೋತಿ
ದಿನಾಂಕ 14-01-2023 ರ ಮಧ್ಯಾಹ್ನ 3 ಗಂಟೆಯಿಂದ 15-01-2023 ರ ಬೆಳಗ್ಗೆ 6 ಗಂಟೆಯವರೆಗೂ ಬೆಟ್ಟದಲ್ಲಿನ ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಹೊನ್ನಾದೇವಿಯ ಗರ್ಭಗುಡಿಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರಿಗೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರ ಅನ್ವಯ ಬೆಟ್ಟ ಹತ್ತುವುದನ್ನು ಮತ್ತು ಇಳಿಯುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗಸ್ತು ತಿರುಗಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ. ಸ
ಇದನ್ನೂ ಓದಿ: ಶಿವಗಂಗೆ ಬೆಟ್ಟದ ಮೇಲೆ ಸ್ವರ್ಗದಂತಹ ಮನಮೋಹಕ ದೃಶ್ಯ: Watch video
ಶಿವಗಂಗೆ ಕ್ಷೇತ್ರದ ಮಾಹಿತಿ: ಶಿವಗಂಗೆ ಕ್ಷೇತ್ರವು ಒಂದು ಸಾಹಸ ಮತ್ತು ಭಕ್ತಿಯ ಕೇಂದ್ರವಾಗಿದೆ. ಸುಮಾರು 804.8 ಮೀಟರ್ ಅಥವಾ 2640.3 ಅಡಿ ಎತ್ತರವಿರುವ ಸುಂದರ ಪರ್ವತ ಶಿಖರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‍ಪೇಟೆಯಿಂದ 7 ಕಿ.ಮೀ ದೂರದಲ್ಲಿ ಹಾಗೂ ಬೆಂಗಳೂರುನಿಂದ 56 ಕಿ.ಮೀ ದೂರದಲ್ಲಿದೆ. ಶಿವಗಂಗೆಯು ಭಕ್ತಿ ಪ್ರಧಾನ ತೀರ್ಥ ಯಾತ್ರೆ ಮತ್ತು ಸಾಹಸಮಯ (ಅಡ್ವೈಂಚರ್) ತಾಣವಾಗಿದೆ. ದೂರದಿಂದ ಬೆಟ್ಟವು ಶಿವಲಿಂಗದ ಆಕಾರದಲ್ಲಿ ಕಾಣುತ್ತದೆ. ಈ ಬೆಟ್ಟವನ್ನು ಶಿವಗಂಗೆ ಎಂದು ಕರೆಯುತ್ತಾರೆ. ನಂದಿ ಕಲ್ಲಿನ ಕೆತ್ತನೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ಗಂಗಾಧರೇಶ್ವರ, ಹೊನ್ನದೇವಿ ದೇವಸ್ಥಾನ, ಒಳಕಲ್ಲು ತೀರ್ಥ ನಂದಿ ಪ್ರತಿಮೆ ಪಾತಳ ಗಂಗೆ, ಇವುಗಳ ಸಂಗಮದಿಂದ ಈ ಸ್ಥಳವನ್ನು ದಕ್ಷಿಣ ಕಾಶಿ ಅಥವಾ ದಕ್ಷಿಣ ಭಾರತದ ಕಾಶಿ ಎಂದು ಕರೆಯಲ್ಪಡುತ್ತದೆ.
ಇದನ್ನೂ ಓದಿ: ಶಿವಗಂಗೆಯಲ್ಲಿ ಹಸಿದ ಕೋತಿಗಳಿಗೆ ಸ್ಥಳೀಯರಿಂದ ಆಹಾರ