ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಅವೆನ್ಯೂ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕು. ಇನ್ನುಳಿದಂತೆ 4 ರಸ್ತೆಗಳಲ್ಲಿ ವಿನ್ಯಾಸ ಬದಲಾವಣೆ ಇದ್ದಲ್ಲಿ ಕೂಡಲೇ ಇದರ ಬಗ್ಗೆ ಗಮನಹರಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದು ಮುಖ್ಯ ಅಭಿಯಂತರರು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳಿಗೆ ಇಂದು ನಡೆದ ಪಾಲಿಕೆ ಸಭೆಯಲ್ಲಿ ಸೂಚಿಸಿದರು.
ಇನ್ನೂ ಆಯುಕ್ತರು ಕೂಡ ಸಭೆಯಲ್ಲಿ ಮಾತನ್ನಾಡುತ್ತ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವೆನ್ಯೂ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬದಲಿ ವಾಹನ ಸಂಚಾರಕ್ಕೆ ಪ್ರಸ್ತಾವನೆಯನ್ನು ಸಂಚಾರ ಇಲಾಖೆಗೆ ಸಲ್ಲಿಸಿ ಮಾಹಿತಿ ನೀಡಿದಲ್ಲಿ ಕೂಡಲೆ ಇಲಾಖೆಯಿಂದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವೆನ್ಯೂ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳ ತಪಾಸಣೆ ಕೈಗೊಂಡು ನೀಡಲಾಗಿದ್ದ ಸೂಚನೆಗಳ ಅನುಸಾರ ಕೈಗೊಂಡ ಕ್ರಮದ ಕುರಿತು ಇಂದು ಆಡಳಿತಗಾರರು ಹಾಗೂ ಆಯುಕ್ತರ ನೇತೃತ್ವದಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಯಿತು.
ಅವೆನ್ಯೂ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಲ ಮಂಡಳಿಯಿಂದ ಯಾವ ರಸ್ತೆಯಲ್ಲಿ ಕೊಳವೆಗಳನ್ನು ಅಳವಡಿಸಲಾಗಿದೆ. ಯಾವ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದರ ಮಾಹಿತಿ ಪಡೆದ ಆಡಳಿತಗಾರರು, ಕೊಳವೆ ಅಳವಡಿಸಲು ಅಗೆದಿರುವ ಭಾಗವನ್ನು ಉತ್ತಮ ಗುಣಮಟ್ಟದ ರೀತಿಯಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಜಲ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.