ಬೆಂಗಳೂರು: ತಮ್ಮ ಪಕ್ಷದ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಪಕ್ಷ ಮತ್ತು ಸಂಘಟನೆ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೃದಯ ಸ್ಪರ್ಶಿ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶವೇನು ? : ಇದು ನಿಮಗೆ ನಾನು ಬಹಳ ಯೋಚಿಸಿ ವೈಯಕ್ತಿಕವಾಗಿ ಬರೆಯುತ್ತಿರುವ ಪತ್ರ. 2018ರ ವಿಧಾನಸಭಾ ಚುನಾವಣೆಯಲ್ಲಿ ನೀವು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೀರಿ, ಪಕ್ಷ ನಿಷ್ಠೆಗಾಗಿ ನೀವು ಪಕ್ಷ ಮಾಡಬಹುದಾದ ಸಹಾಯವನ್ನೂ ಮೀರಿ ನಿಮ್ಮದೇ ಆದ ಸಂಪನ್ಮೂಲಗಳಿಂದ ಪಕ್ಷದ ಧ್ವಜವನ್ನು ಎತ್ತಿ ಹಿಡಿಯಲು ಹೋರಾಟ ಮಾಡಿದ ಬಗ್ಗೆ ನಾನು ನಿಮಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸೋಲು - ಗೆಲುವು ಸಹಜ. ಆದರೆ, ಆರ್ಥಿಕ ಸಂಕಷ್ಟಗಳ ಸವಾಲುಗಳ ಮಧ್ಯೆ ನೀವು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತ ಬಂದಿದ್ದೀರಿ. 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಉಂಟಾದ ವೈಪರೀತ್ಯಗಳು ಮತ್ತು ವಿರೋಧಾಭಾಸಗಳ ಮಧ್ಯದಲ್ಲೂ ನೀವು ಮುಜುಗರಕ್ಕೊಳಗಾಗಿದ್ದೀರಿ. ಆದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಿದ್ದೀರಿ. ಈಗ ವಿಧಾನಸಭೆ ಚುನಾವಣೆ ಮುಗಿದು ಎರಡೂವರೆ ವರ್ಷಗಳಾಗಿವೆ. ಇನ್ನೂ ಒಂದು ವರ್ಷದ ನಂತರ ಚುನಾವಣೆ ಬಿಸಿ ಆರಂಭವಾಗುತ್ತದೆ. ಪಕ್ಷದ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ನಿಷ್ಟರಾಗಿ ಇಷ್ಟು ವರ್ಷ ನಮ್ಮೊಂದಿಗೆ ಕೆಲಸ ಮಾಡುತ್ತ ಬಂದಿರುವ ನಿಮ್ಮ ಭವಿಷ್ಯ ಉಜ್ವಲವಾಗಿ ಇರಬೇಕು ಎಂಬುದು ನನ್ನ ಅಪೇಕ್ಷೆ ಎಂದು ಹೇಳಿದ್ದಾರೆ.
ದುರದೃಷ್ಟವಶಾತ್ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಪಕ್ಷ ಪಾಲುದಾರ ಪಕ್ಷವಾಗಿ ನಮ್ಮ ಪಕ್ಷದ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಿಮ್ಮಗಳ ಹಿತವನ್ನು ರಕ್ಷಿಸುವಲ್ಲಿ ನಾವು ಎಡವಿದ್ದೇವೆ. ತಪ್ಪು ಮಾಡಿದ್ದಾರೆ ಎಂಬುದನ್ನು ನಾವು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇವೆ. ಹಾಗಾಗಿ ನೀವು ಎಷ್ಟರಮಟ್ಟಿಗೆ ನಿಮ್ಮ ಉತ್ಸಾಹ ಮತ್ತು ಸ್ಥೈರ್ಯ ವನ್ನು ಕಳೆದು ಕೊಂಡಿರುವುದರಿಂದ ಅದು ಪಕ್ಷಕ್ಕೆ ಅಷ್ಟರಮಟ್ಟಿಗೆ ದೊಡ್ಡ ಹಾನಿಯನ್ನು ಮಾಡಿದೆ.
ಹೀಗೆ ಸ್ವಲ್ಪ ಮಂಕಾಗಿರುವ ಮತ್ತು ನಿಸ್ತೇಜವಾಗಿರುವ ಪಕ್ಷವನ್ನು ಇನ್ನೂ ಒಂದು ವರ್ಷದ ಅವಧಿಯಲ್ಲಿ ಚುರುಕುಗೊಳಿಸಲೇ ಬೇಕಾಗಿದೆ. ಅದರ ಅನಿವಾರ್ಯತೆಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಾನು ನಂಬಿದ್ದೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ದುರದೃಷ್ಟವಶಾತ್ ಜಗತ್ತೇ ಕೊರೊನಾ ಹೆಮ್ಮಾರಿಯಿಂದ ಕಂಗೆಟ್ಟಿದೆ. ಇದಕ್ಕೆ ನಮ್ಮ ರಾಜ್ಯವೂ ಹೊರತಾಗಿಲ್ಲ. ಲಾಕ್‌ಡೌನ್, ಸೀಲ್‌ಡೌನ್, ನಿಷೇಧ, ನಿರ್ಬಂಧ- ಇವುಗಳಿಂದಾಗಿ ನಮ್ಮ ವೈಯಕ್ತಿಕ ಚಟುವಟಿಕೆಗಳಷ್ಟೇ ಅಲ್ಲ ಪಕ್ಷದ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ನಿಮ್ಮನ್ನು ಖದ್ದಾಗಿ ಬರಮಾಡಿಕೊಂಡು ನಿಮ್ಮೊಂದಿಗೆ ನೇರವಾಗಿ ಮನಬಿಚ್ಚಿ ಮಾತನಾಡಬೇಕು ಎಂಬ ನನ್ನ ಆಲೋಚನೆಯನ್ನು ಅನುಷ್ಠಾನಕ್ಕೆ ತರಲು ಲಾಕ್‌ಡೌನ್ ಅಡ್ಡಿಯಾಯಿತು. ಹಾಗಾಗಿ ಈ ಪತ್ರ ಬರೆಯುವುದು ಅನಿವಾರ್ಯವಾಯಿತು ' ಎಂದು ಹೇಳಿದ್ದಾರೆ.
ಲಾಕ್‌ಡೌನ್ ಯಾವಾಗ ಮುಗಿಯುತ್ತದೋ ಹೇಳಲು ಸಾಧ್ಯವಿಲ್ಲ. ಕೊರೊನಾ ಪರಿಸ್ಥಿತಿ ಮತ್ತಷ್ಟು ತಿಂಗಳು ಮುಂದುವರೆಯುತ್ತದೋ ಗೊತ್ತಿಲ್ಲ. ಹಾಗೆಂದು ನಾವು, ನೀವು ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ನೀವು 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಟ್ಟಿಗಾದರೂ ಕ್ರಿಯಾಶೀಲರಾಗಿರಬೇಕು. ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಕಾಯ್ದುಕೊಂಡು ಬರಬೇಕು. ಜನಗಳ ಮಧ್ಯೆ ಇದ್ದೇನೆ ಎಂಬುದನ್ನು ತೋರಿಸಲು ಹೋಬಳಿ ಮಟ್ಟಗಳಲ್ಲಿ, ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಒಂದಿಲ್ಲೊಂದು ಕಾರ್ಯಕ್ರಮ, ಚಟುವಟಿಕೆಗಳನ್ನು ಹಾಕಿಕೊಳ್ಳಬೇಕು. ಲಾಕ್‌ಡೌನ್ ಇರುವುದರಿಂದ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಅಸ್ತಿತ್ವ ಮತ್ತು ಕ್ರಿಯಾಶೀಲತೆಯನ್ನು ಪಕ್ಷದ ಕಾರ್ಯಕರ್ತರಿಗೆ ಮತ್ತು ತನ್ಮೂಲಕ ನಿಮ್ಮ ಕ್ಷೇತ್ರದ ಮತದಾರರಿಗೆ ತಲುಪಿಸುವ ಕಾರ್ಯಕ್ಕೆ ನೀವು ಮುಂದಾಗಬೇಕು. ಕೊರೊನಾ ವಿಷಯದಲ್ಲಿ ಸರ್ಕಾರಿ ಕಾರ್ಯಕ್ರಮಗಳು ಒಂದು ಕಡೆಯಾದರೆ, ಪಕ್ಷದದಿಂದ ಮತ್ತು ವೈಯಕ್ತಿಕವಾಗಿ ನೀವು ಈ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬ ಭಾವನೆ ಮೂಡುವಂತೆ ನಿಮ್ಮ ನಿಮ್ಮ ಕ್ಷೇತ್ರಕ್ಕೆ ಹೊಂದಿಕೆಯಾಗುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಮುಖಂಡರಿಗೆ ಪತ್ರದ ಮೂಲಕ ಗೌಡರು ಸಲಹೆ ಮಾಡಿದ್ದಾರೆ.
ಜೊತೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಬಡವರ ವಿರೋಧಿಯಾಗಿ ಮತ್ತು ರೈತರ ವಿರೋಧಿಯಾಗಿ ತೆಗೆದುಕೊಂಡಿರುವ ನಿರ್ಧಾರಗಳ ವಿರುದ್ಧ ಪ್ರಚಾರ ನೀಡಬೇಕು. ಜಾತ್ಯತೀತತೆ, ಸಾಮಾಜಿಕ ನ್ಯಾಯ, ಪ್ರಾದೇಶಿಕತೆ, ಇವುಗಳು ಹೇಗೆ ನಮ್ಮ ಪಕ್ಷ ಎರಡು ರಾಷ್ಟ್ರೀಯ ಪಕ್ಷ ಗಳಿಗಿಂತ ಅನಿವಾರ್ಯ ಎಂಬುದನ್ನು ತಿಳಿಸಿ ಹೇಳುವ ಕೆಲಸ ಮಾಡಬೇಕು. ಉದಾಹರಣೆಗೆ ಭೂ ಸುಧಾರಣಾ ಕಾಯ್ದೆಗೆ ಬಿಜೆಪಿ ಸರ್ಕಾರ ತಂದಿರುವ ತಿದ್ದುಪಡಿ ಹೇಗೆ ರೈತ ವಿರೋಧಿ ಮತ್ತು ಬಂಡವಾಳ ಶಾಹಿಗಳ ಪರ ಎಂಬುದನ್ನು ನಾವು ರೈತರಿಗೆ ಮತ್ತು ವಿದ್ಯಾವಂತ ಯುವಕರಿಗೆ ಮನವರಿಕೆ ಮಾಡಿಸಬೇಕು.
ಎಪಿಎಂಸಿ ತಿದ್ದುಪಡಿ ಅಷ್ಟೇ, ಹೇಗೆ ರೈತರಿಗೆ ಮಾರಕವಾಗಿದೆ ಎಂಬುದನ್ನು ಹೇಳಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರುವ ಕಾರಣ ಪಠ್ಯ ವಿಷಯಗಳನ್ನು ಕಡಿಮೆಗೊಳಿಸುವ ನೆಪದಲ್ಲಿ ನಮ್ಮ ಸಂವಿಧಾನದ ಮೂಲ ಆಶಯಗಳು ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ, ಜನತಂತ್ರ ಮೊದಲಾದ ಮೂಲ ಸಂಗತಿಗಳಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಮುಂಬರುವ ದಿನಗಳಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ದಾರಿಯಾಗಬಹುದು. ಈ ಬಗ್ಗೆಯೂ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ಆದುದರಿಂದ ತಾವು ದಯವಿಟ್ಟು ಈ ವಿಷಯದಲ್ಲಿ ನಿಮ್ಮ ಭವಿಷ್ಯ ಮತ್ತು ಪಕ್ಷದ ಭವಿಷ್ಯ ಎರಡೂ ಅಡಗಿದೆ ಎಂಬುದನ್ನು ಅರ್ಥಮಾಡಿಕೊಂಡು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಚುರುಕಾಗಿ ಪಕ್ಷದ ಸಂಘಟನೆ, ಜನಸ್ಪಂದನ ಮತ್ತು ಜನಜಾಗೃತಿಯ ಜನಪರ ಕಾರ್ಯಕ್ರಮಗಳ ಬಗ್ಗೆ ಯಾಚಿಸಬೇಕೆಂದು ಹಾಗೂ ಕೊರೊನಾ ವಾತಾವರಣ ತಿಳಿಯಾಗುವವರೆಗೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.