ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಹೊಂದಿಕೊಂಡು ಹೋದರೆ ನಾಲ್ಕು ವರ್ಷದ ನಂತರ ಚುನಾವಣೆ ಆಗುತ್ತದೆ. ಅಷ್ಟರಲ್ಲಿ ಪಕ್ಷ ಸಂಘಟನೆ ಆಗಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಹಿಳಾ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ತುರ್ತಾಗಿ ಹಮ್ಮಿಕೊಂಡಿದ್ದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಆಯ್ಕೆ, ಮಹಿಳಾ ಸಮಾವೇಶ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಗೌಡರು, ಸಿಎಂ ಕುಮಾರಸ್ವಾಮಿ ಅವರು ಸರ್ಕಾರ ನಡೆಸುತ್ತಾರೆ. ನಾನು ಪಕ್ಷ ಸಂಘಟನೆ ಮಾಡುತ್ತೇನೆ. ನಾನು ಆನೇಕ ಏಳು ಬೀಳುಗಳನ್ನು ನೋಡಿದ್ದೇನೆ. ಕುಗ್ಗುವುದಿಲ್ಲ, ಹೆಣ್ಣುಮಕ್ಕಳಿಗೆ ರಾಜಕೀಯ ಶಕ್ತಿ ಕೊಡುವ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದು ಹೇಳಿದರು.
ಮುಂದಿನ ತಿಂಗಳು ಮಹಿಳಾ ಸಮಾವೇಶ:
ಜುಲೈನಲ್ಲಿ ಕನಿಷ್ಠ 50 ಸಾವಿರ ಮಹಿಳೆಯರನ್ನು ಸೇರಿಸಿ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇನೆ. ಜಿಲ್ಲಾ ಘಟಕಗಳನ್ನು ರಚನೆ ಮಾಡಿ ಅದರಲ್ಲಿ ಕಾರ್ಯಾಧ್ಯಕ್ಷರು, ಅಧ್ಯಕ್ಷರ ನೇಮಕ ಮಾಡುತ್ತೇವೆ. ನಿಮ್ಮ ಆಯ್ಕೆ ಯಾರು ಆಗಬೇಕೆಂದು ನಿರ್ಧರಿಸಿ. ಈಗಿನಿಂದಲೇ ಹೊಸ ಅಧ್ಯಾಯ ಪ್ರಾರಂಭ ಮಾಡೋಣ ಎಂದು ಗೌಡರು ಸಭೆಯಲ್ಲಿ ಮಹಿಳಾ ಸದಸ್ಯರಿಗೆ ಹೇಳಿದರು. ದೇಶದಲ್ಲಿ ಶೇ. 51ರಷ್ಟು ಮಹಿಳೆಯರಿದ್ದಾರೆ. ಅವರಿಗೆ ಮೀಸಲಾತಿ ಕಲ್ಪಿಸುವ ಅಗತ್ಯವಿದೆ. ಆದರೆ, ಮಹಿಳಾ ಮೀಸಲಾತಿ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಸಕ್ತಿ ವಹಿಸುತ್ತಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದರ ಬಗ್ಗೆ ಆಸಕ್ತಿ ವಹಿಸಿದ್ದರು. ನಾನು ಇದನ್ನು ಮತ್ತೆ ನೆನಪಿಸಬೇಕಿತ್ತು. ಆದರೆ ನಾನು ಸೋತಿದ್ದೇನೆ. ಆದರೂ ಪ್ರಾದೇಶಿಕ ಪಕ್ಷ ಉಳಿಸುವ ಕೆಲಸ ಮಾಡುತ್ತೇನೆ ಎಂದರು. ನಾನು ಶಿಕ್ಷಕ ವರ್ಗಕ್ಕೆ ಶೇ. 50ರಷ್ಟು ಮೀಸಲಾತಿ ಕೊಟ್ಟಿದ್ದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಗೂ ಮಹಿಳಾ ಮೀಸಲಾತಿ ಕೊಟ್ಟೆ. ಮೀಸಲಾತಿ ಕಾರಣದಿಂದ ಮಹಿಳೆಯರು ಮೇಯರ್ ಸಹ ಆದರು ಎಂದು ಮಹಿಳಾ ಘಟಕದ ಸಭೆಯಲ್ಲಿ ನೆನಪಿಸಿದರು.
ನಾನು ಎಲ್ಲವನ್ನು ಆಲಿಸುತ್ತೇನೆ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಮುಂದಿನ ತಿಂಗಳು ನಡೆಯುವ ಜೆಡಿಎಸ್ ಮಹಿಳಾ ಸಮಾವೇಶದ ದಿನದಂದು ಮಹಿಳಾ ಘಟಕದ ಅಧ್ಯಕ್ಷರ ಹೆಸರು ಘೋಷಣೆ ಮಾಡಲಾಗುವುದು ಎಂದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ರೂತ್ ಮನೋರಮಾ ಸೇರಿದಂತೆ ಹಲವಾರು ಮಹಿಳಾ ಮುಖಂಡರು ತಮ್ಮ ಅನಿಸಿಕೆಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಸಭೆಯಲ್ಲಿ ಗರಂ ಆದ ಮಹಿಳೆಯರು:
ವೇದಿಕೆಯಲ್ಲಿ ಬೆಂಗಳೂರು ಘಟಕದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಗರಂ ಆದ ಇತರ ಜಿಲ್ಲಾ ಮಹಿಳಾ ಪದಾಧಿಕಾರಿಗಳು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಹಿರಂಗವಾಗಿಯೇ ಸಂಘಟಕರಿಗೆ ತರಾಟೆಗೆ ತೆಗೆದುಕೊಂಡ ಮಹಿಳಾ ಸದಸ್ಯರು, ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಯಾವ ಸಭೆ ನಡೆದರೂ ವೇದಿಕೆಯಲ್ಲಿ ಬೆಂಗಳೂರಿಗರೇ ಇರುತ್ತಾರೆ. ನಾವುಗಳು ಕಾಣಿಸುವುದಿಲ್ಲವೇ? ನಾವು ಅಷ್ಟು ದೂರದಿಂದ ಬರೋದ್ ಯಾಕೆ?. ನಮಗೆ ಯಾರಿಗೂ ಸಾಮರ್ಥ್ಯವಿಲ್ಲವೇ?. ವೇದಿಕೆಯಲ್ಲಿ ನಾವು ಮಾತನಾಡುವುದು ಯಾವಾಗ? ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆಗೈದರು. ಇದರಿಂದ ಸಭೆ ಆಯೋಜಿಸುತ್ತಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಹಾಗೂ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಮುಜುಗರಕ್ಕೀಡಾದರು. ನಂತರ ಮಹಿಳಾ ಪದಾಧಿಕಾರಿಗಳನ್ನು ಸಮಾಧಾನಪಡಿಸಲಾಯಿತು.