ಬೆಂಗಳೂರು: ಕರ್ನಾಟಕದ ಹಲವೆಡೆ ವರುಣನ ರೌದ್ರಾವತಾರಕ್ಕೆ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಪರಿಹಾರಕ್ಕಾಗಿ ತುರ್ತಾಗಿ 5 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪಿಎಂ ದೇವೇಗೌಡ ಪತ್ರ ಬರೆದಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲದಿದ್ದರೂ ಪ್ರವಾಹದ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಕೆಲವೊಂದು ಕಡೆ ಮಳೆ ಸದ್ಯ ಕಡಿಮೆಯಾಗಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮಘಟ್ಟ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದರಿಂದ ಕರ್ನಾಟಕದ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಮಾಹಿತಿ ನೀಡಿದರು.
![Devegawda letter](https://etvbharatimages.akamaized.net/etvbharat/prod-images/4114520_letter.jpg)
ಸದ್ಯ ರಾಜ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಬೇಡ. ಜನರ ಸಮಸ್ಯೆಗಳನ್ನು ನಾವು ಪರಿಹರಿಸಬೇಕು. ನನಗೆ ಯಾವುದೇ ಸಂಬಳ ಬರುತ್ತಿಲ್ಲ. ನಾನು ಯಾವುದೇ ಪಿಂಚಣಿಯನ್ನು ತೆಗೆದುಕೊಳ್ಳುತ್ತಿಲ್ಲ. ಸದ್ಯ ನನ್ನ ಬ್ಯಾಂಕ್ ಅಕೌಂಟ್ ನಲ್ಲಿ 24 ಲಕ್ಷ ರೂ. ಹಣ ಇರಬಹುದು. ನನ್ನ ಬ್ಯಾಂಕ್ ಅಕೌಂಟ್ ನಿಂದ ನಾನು 2 ಲಕ್ಷ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ ಎಂದರು.
ಮೊದಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಲಿ. ಅದನ್ನು ನೋಡಿಕೊಂಡು ನಾನು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಲಿ ಎಂದು ಪಿಎಂ ಮೋದಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿ ಕೊಂಚ ಇಳಿದ ಮೇಲೆ ನಾನು ಪ್ರವಾಸ ಮಾಡುತ್ತೇನೆ. ಎಲ್ಲೆಲ್ಲಿ ಏನೇನು ಸಮಸ್ಯೆ ಆಗಿದೆ. ಎಷ್ಟು ರಸ್ತೆ ಹಾಳಾಗಿದೆ, ಎಷ್ಟು ಸೇತುವೆ, ಮನೆ ಹಾಳಾಗಿದೆ ಎಂಬುದನ್ನು ಖುದ್ದು ಪರಿಶೀಲನೆ ಮಾಡುತ್ತೇನೆ. ಎಲ್ಲ ಭಾಗಗಳಲ್ಲೂ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ಪ್ರವಾಹ ಪರಿಸ್ಥಿತಿಯಲ್ಲಿ ನಾವ್ಯಾರು ರಾಜಕೀಯ ಮಾಡುವುದು ಬೇಡ. ಯಡಿಯೂರಪ್ಪ 3 ಸಾವಿರ ಕೋಟಿ ರೂ. ಕೊಡಿ ಎಂದು ಕೇಳಿದ್ದಾರೆ. ನನ್ನ ಅನುಭವದ ಮೇಲೆ ನಾನು ಮಧ್ಯಂತರವಾಗಿ 5000 ಕೋಟಿ ರೂ. ಕೊಡಲಿ ಎಂದು ಕೇಳಿದ್ದೇನೆ ಎಂದರು.