ಬೆಂಗಳೂರು: ಇಲ್ಲಿ ಜಮೀನಿನ ಬೆಲೆ ಮಾತ್ರ ಗಗನಕ್ಕೇರಿಲ್ಲ. ಜೊತೆಗೆ, ಇಲ್ಲಿಗೆ ಬರುವಂತಹ ಅಧಿಕಾರಿಗಳು ಸಹ ನಾ ಮುಂದು ತಾ ಮುಂದು ಎಂದು ಭ್ರಷ್ಟಾಚಾರಕ್ಕಿಳಿದು ಇಲ್ಲಿನ ಜಮೀನುಗಳ ವಹಿವಾಟಿನಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ದೇವನಹಳ್ಳಿ ತಾಲೂಕಲ್ಲಿ ಕೇಳಿಬಂದಿವೆ.
ಇಲ್ಲಿನ ಸಬ್ ರಿಜಿಸ್ಟ್ರಾರ್ಗಳಿಗೆ ಭಾರಿ ಬೇಡಿಕೆಯಿದೆ. ಇವರೆಲ್ಲ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದು, ನಿಯಮ ಬಾಹಿರವಾಗಿ ಸರ್ಕಾರಿ ಜಮೀನುಗಳನ್ನು ರಿಜಿಸ್ಟರ್ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.
ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬೃಹತ್ ಗೋಲ್ ಮಾಲ್ ನಡೆಯುತ್ತಿದೆ ಎನ್ನಲಾಗ್ತಿದೆ. ಸರ್ಕಾರಿ ನಿಯಮಗಳಂತೆ ಸೈಟ್ ನ್ನು ರಿಜಿಸ್ಟರ್ ಮಾಡಬೇಕಾದರೆ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಇ-ಸ್ವತ್ತು ಮಾಡಿಸಬೇಕಾಗುತ್ತದೆ. ಇನ್ನು ಕೃಷಿ ಜಮೀನಿನಲ್ಲಿ ಲೇಔಟ್ ಮಾಡಿ ಸೈಟ್ಗಳ ನೋಂದಣಿ ಮಾಡಿಸಬೇಕಾದ್ರೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದ್ರೆ ಇಲ್ಲಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲವಂತೆ. ದುಡ್ಡು ಕೊಟ್ರೆ ಸಾಕು ಯಾವ ಸೈಟ್ ಬೇಕಾದ್ರು ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ರ್ಸ್ ಮಾಡುತ್ತಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೇಳಲು ಹೋದ್ರೆ ಮಾಧ್ಯಮದವರ ಮೇಲೂ ಗರಂ ಆಗ್ತಾರೆ.
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸರ್ವೇ ನಂಬರ್ 215 ರಲ್ಲಿನ ಜಮೀನು ರಿಜಿಸ್ಟರ್ ಅಗಿದೆ. ಸರ್ವೇ ನಂಬರ್ 215 ರಲ್ಲಿರುವುದು ಸರ್ಕಾರಿ ಗೋಮಾಳದ ಜಮೀನು. ಕೆಲವರು ಅನಧಿಕೃತವಾಗಿ ಸೈಟ್ಗಳನ್ನು ಮಾಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಗೋಮಾಳವನ್ನೇ ಸಬ್ ರಿಜಿಸ್ಟ್ರಾರ್ಗಳಾದ, ಶ್ರೀನಾಥ್, ಅಂಜಲಿ, ರವೀಂದ್ರ ಬೇರೆಯವರ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೇವಲ ಇಷ್ಟು ಮಾತ್ರವಲ್ಲ, ದೇವನಹಳ್ಳಿ ತಾಲೂಕಿನಾದ್ಯಂತ ನಿರ್ಮಾಣವಾಗುತ್ತಿರುವ ಅನಧಿಕೃತ ಬಡಾವಣೆಗಳನ್ನು ಸಹ ಕಾನೂನು ಬಾಹಿರವಾಗಿ ಯಾವುದೇ ದಾಖಲಾತಿಗಳನ್ನು ಪಡೆಯದೇ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಒಟ್ಟಾರೆ ಈ ದಂಧೆ ಎಲ್ಲಾ ಅಧಿಕಾರಿಗಳಿಗೆ ಕಣ್ಣೆದುರೇ ನಡೆಯುತ್ತಿದೆ. ಆದ್ರೆ ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲದಂತೆ ಕಾಣ್ತಾನೆ ಇಲ್ಲ ಎಂಬಂತಿದ್ದಾರಂತೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.