ಬೆಂಗಳೂರು: ಕೊರೊನಾ ಸೋಂಕು ಭಯದ ಬೆನ್ನಲ್ಲೇ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದಿದ್ದು, ಕೆಲ ಸಮಯ ಭಯ ಪಡುವ ವಾತಾವಾರಣ ನಿರ್ಮಾಣವಾಗಿತ್ತು. ಪಟಾಕಿ ಮಾದರಿಯ ವಸ್ತು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ-ಅಶೋಕನಗರ ಜಂಕ್ಷನ್ ಬಳಿ ಪತ್ತೆಯಾಗಿದೆ.
ಅದನ್ನು ಕಂಡು ಭಯಭೀತರಾದ ಜನ ಸ್ಫೋಟಕ ವಸ್ತು ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಹನುಮಂತನಗರ ಠಾಣಾ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪಟಾಕಿ ಮಾದರಿ ವಸ್ತು ಇರುವುದು ಕಂಡು ಬಂದಿದ್ದು, ತಕ್ಷಣ ಎಫ್ಎಸ್ಎಲ್ ಕಚೇರಿಗೆ ರವಾನೆ ಮಾಡಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಈ ಬಗ್ಗೆ ಪಶ್ಚಿಮ ವಿಭಾಗ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಸಾರ್ವಜನಿಕರು ನೆಮ್ಮದಿಯಿಂದ ಇರಿ ಎಂದಿದ್ದಾರೆ.
ಇನ್ನು ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಮಾತನಾಡಿ, ಇದು ಮೇಲ್ನೋಟಕ್ಕೆ ಪಟಾಕಿ ಎಂದು ಕಂಡು ಬಂದಿದೆ. ನಾವು ತಕ್ಷಣ ಬಾಂಬ್ ಸ್ಕ್ವಾಡ್ ಮತ್ತು ಎಫ್ಎಸ್ಎಲ್ ಅವರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದೇವೆ. ಅನುಮಾನಾಸ್ಪದ ವಸ್ತುವನ್ನ ಮಡಿವಾಳದ ಎಫ್ಎಸ್ಎಲ್ಗೆ ಕಳಿಸಿದ್ದು, ಯಾರೋ ಮನೆಯಲ್ಲಿದ್ದ ಪಟಾಕಿ ಮಾದರಿಯ ವಸ್ತು ಬಿಸಾಡಿದ್ದಾರೆ. ನಿನ್ನೆ ಮಳೆ ಬಂದಾಗ ಡ್ರೈನೇಜ್ ಮೂಲಕ ಹರಿದು ಬಂದಿರುವ ಸಾಧ್ಯತೆ ಇದೆ. ಇದರಿಂದ ಸದ್ಯ ಯಾವುದೇ ಆತಂಕವಿಲ್ಲ. ಎಫ್ಎಸ್ಎಲ್ ವರದಿ ಬಳಿಕ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ ಎಂದರು.