ಬೆಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಹಿನ್ನೆಲೆ ಉದ್ರಿಕ್ತಗೊಂಡ ಕಿಡಿಗೇಡಿಗಳು ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಧ್ವಂಸ ಪ್ರಕರಣ ಸಂಬಂಧ ಈಗಾಗಲೇ ಡಿ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಸಕರು ದೂರು ದಾಖಲಿಸಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆ ಕಮೀಷನರ್ ಕಮಲ್ ಪಂತ್ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಮನೆ ಧ್ವಂಸದಿಂದ 3 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಹಾಗಾದರೆ ಅಖಂಡ ನೀಡಿರುವ ದೂರಿನಲ್ಲಿ ಮನೆಯಲ್ಲಿ ಎಷ್ಟು ನಗದು ಇತ್ತು? ಎಷ್ಟು ಚಿನ್ನಾಭರಣವಿತ್ತು? ಸಹೋದರರಿಗೆ ಸೇರಿದ ಹಣವೆಷ್ಟು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲಿದೆ.
ಶಾಸಕರು ಕೊಟ್ಟ ದೂರಿನಲ್ಲಿ ಏನಿದೆ?
ಕಾವಲ್ ಭೈರಸಂದ್ರದ ಮೂರು ಅಂತಸ್ತಿನ ಮನೆಯಲ್ಲಿ ಶಾಸಕru ಸೇರಿದಂತೆ ಇಬ್ಬರು ಸಹೋದರರಾದ ಚಂದ್ರಶೇಖರ್ ಹಾಗೂ ಮಹೇಶ್ ಕುಮಾರ್ ಕುಟುಂಬ ವಾಸವಾಗಿತ್ತು. ಗಲಭೆಯಲ್ಲಿ ಶಾಸಕರ ಆಸ್ತಿ ಜೊತೆ ಸಹೋದರ ಆಸ್ತಿ ಸುಟ್ಟು ಭಸ್ಮವಾಗಿದೆ.
ಶಾಸಕರಿಗೆ ಸೇರಿದ 20 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಮನೆಯ ಕಟ್ಟಡ ಸಂಪೂರ್ಣ ನಾಶವಾಗಿದ್ದು, 50 ಲಕ್ಷ ರೂ. ನಷ್ಟವಾಗಿದೆ. ಕಾರು ಹಾಗೂ ಬೈಕ್ಗಳು ಸೇರಿ 20 ಲಕ್ಷ ಮೌಲ್ಯದ ವಾಹನಗಳು ಭಸ್ಮವಾಗಿವೆ. ಶಾಸಕರಿಗೆ ಸೇರಿದ ಶ್ಯಾಂಪುರ ಮುಖ್ಯರಸ್ತೆಯಲ್ಲಿರುವ ವಾಸದ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಪತ್ರಗಳು, ಸಾದಹಳ್ಳಿಯಲ್ಲಿರುವ ಜಮೀನಿನ ಮೂಲಪತ್ರಗಳು, ವಾಹನಗಳ ಮೂಲ ದಾಖಲೆಗಳು ನಾಶವಾಗಿವೆ. ಆರು ಗಾಡ್ರೆಜ್ ಬೀರುಗಳು, ಎರಡು ಲ್ಯಾಪ್ ಟಾಪ್, ಎರಡು ಟಿವಿ ಅಗ್ನಿಗೆ ಆಹುತಿಯಾಗಿವೆ. ವಾಸದ ಮನೆ ಹಾಗೂ ಧ್ವಂಸಗೊಂಡ ಮನೆಯಿಂದ 50 ಲಕ್ಷ ರೂ. ನಷ್ಟವಾಗಿದೆ. ಹೊಂಡಾ ಬ್ರಿಯೊ ಕಾರು, 14 ವಿವಿಧ ಕಂಪೆನಿಯ ಬೈಕ್ಗಳು ಸುಟ್ಟು ಹೋಗಿದ್ದು, ಇದರ ಬೆಲೆ ಸುಮಾರು 20 ಲಕ್ಷವಾಗಿದೆ.
ಇಬ್ಬರು ಸಹೋದರರು ಕಳೆದಕೊಂಡ ಆಸ್ತಿ ವಿವರ
ಸಹೋದರ ಮಹೇಶ್ ಕುಮಾರ್ಗೆ ಸೇರಿದ 250 ಗ್ರಾಂನ 10 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿಯಾಗಿದೆ. ಮತ್ತೊಬ್ಬ ಸಹೋದರ ಚಂದ್ರಶೇಖರ್ ಮನೆಯಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿಯಾಗಿದೆ. ಬೀರುನಲ್ಲಿದ್ದ 8 ಲಕ್ಷ ನಗದು, ಕಾರು ನೋಂದಣಿ ಪತ್ರಗಳು, ವಿದ್ಯಾಭ್ಯಾಸದ ಪ್ರಮಾಣ ಪತ್ರಗಳು, ಜಮೀನು ಪತ್ರಗಳು ನಾಶವಾಗಿವೆ.
ಇನ್ನೋರ್ವ ಸಹೋದರ ಚಂದ್ರಶೇಖರ್ ಮನೆಯಲ್ಲಿದ್ದ 3 ಲಕ್ಷ ಕ್ಯಾಶ್ ಕೂಡ ಕಳ್ಳತನವಾಗಿದೆ. 20 ಲಕ್ಷದ ಮೌಲ್ಯದ 500 ಗ್ರಾಂ ಚಿನ್ನಾಭರಣ, 3 ಲಕ್ಷ ನಗದು ಕಳ್ಳತನವಾಗಿದೆ. ಜಮೀನು ಪತ್ರಗಳು ಸೇರಿದಂತೆ ಮೂವರು ಸಹೋದರರಿಗೆ ಒಟ್ಟು 3 ಕೋಟಿ ರೂ.ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಬಳಿಕ ಭದ್ರತೆಯ ದೃಷ್ಟಿಯಿಂದ ಮನೆಗೆ ಭೇಟಿ ನೀಡಲಾಗಿರಲಿಲ್ಲ. ಇದೊಂದು ಪೂರ್ವ ನಿಯೋಜಿತ ಘಟನೆಯಾಗಿದೆ. ಸಾವಿರಾರು ಕಿಡಿಗೇಡಿಗಳನ್ನು ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ಕಿಡಿಗೇಡಿಗಳನ್ನ ಅಕ್ಕಪಕ್ಕದ ಮನೆಯವರು, ಸ್ನೇಹಿತರು ನೋಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಶ್ರೀನಿವಾಸಮೂರ್ತಿ ಉಲ್ಲೇಖಿಸಿದ್ದಾರೆ.