ಬೆಂಗಳೂರು: ರಾಜ್ಯದಲ್ಲಿ ಜಾತಿ ಆಧಾರಿತ ನಿಗಮ-ಮಂಡಳಿಗಳ ಸ್ಥಾಪನೆ ಪ್ರಶ್ನಿಸಿ ವಕೀಲ ಎಸ್.ಬಸವರಾಜ್ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಅಕ್ಟೋಬರ್ 21 ರಂದು ಅನುದಾನದ ವಿವರ ನೀಡುವಂತೆ ನಿರ್ದೇಶಿಸಿತ್ತು. ಆ ಪ್ರಕಾರ ಸರ್ಕಾರದ ಪರ ವಕೀಲರು ಜಾತಿ ಆಧಾರಿತ ನಿಗಮ ಮಂಡಳಿಗೆ ಸರ್ಕಾರ ಮಂಜೂರು ಮಾಡಿದ ಒಟ್ಟು ಹಣ ಹಾಗೂ ಅದರಲ್ಲಿ ನಿಗಮ ಮಂಡಳಿಗಳು ವ್ಯಯಿಸಿರುವ ಹಣದ ವಿವರಗಳನ್ನು ಪೀಠಕ್ಕೆ ಸಲ್ಲಿಸಿದರು.
ವಿಚಾರಣೆ ವೇಳೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪರ ವಕೀಲರು ವಾದಿಸಿ, ಯಡಿಯೂರಪ್ಪ ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಜನವರಿ 19 ರಂದು ರಾಜ್ಯದಲ್ಲಿ ಶೇ.13ರಷ್ಟು ಮತ ಪ್ರಮಾಣ ಹೊಂದಿರುವ ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಮಂಡಳಿ ರಚಿಸಿ ಆದೇಶ ಮಾಡಿದ್ದರು. ಅದರಂತೆ ಜಾತಿ ಆಧಾರಿತ ನಿಗಮ ಮಂಡಳಿಗಳನ್ನು ರಚಿಸಿ ಅವುಗಳಿಗೆ ಅನುದಾನ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಂಡಳಿಗಳಿಗೆ ತಮ್ಮ ರಾಜಕಾರಣಿಗಳ ಬೆಂಬಲಿಗರು ಹಾಗೂ ಸಂಬಂಧಿಗಳನ್ನು ಸದಸ್ಯರನ್ನಾಗಿ, ಸಿಬ್ಬಂದಿಯಾಗಿ ನೇಮಿಸಲಾಗುತ್ತಿದೆ. ಹೀಗಾಗಿ ಪ್ರಕರಣವನ್ನು ತುರ್ತಾಗಿ ಆಲಿಸಬೇಕು. ಇಂದೇ ವಿಚಾರಣೆ ಆರಂಭಿಸಿದರೂ ವಾದ ಮಂಡನೆಗೆ ಸಿದ್ಧವೆಂದು ತಿಳಿಸಿದರು.
ಸರ್ಕಾರದ ಪರ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಹಿಂದಿನ ನ್ಯಾಯಮೂರ್ತಿಗಳು 20 ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಸರ್ಕಾರವು ಸಮಗ್ರವಾದ ಆಕ್ಷೇಪಣೆ ಸಿದ್ಧಪಡಿಸಿದೆ. ನವೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ವಿಚಾರಣೆ ನಡೆಸಿದರೆ ವಾದ ಮಂಡಿಸಲಾಗುವುದು ಎಂದರು. ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಪರ ವಕೀಲರು, ಮೊದಲಿಗೆ ಅರ್ಜಿಗಳು ವಿಚಾರಣೆ ಮಾನ್ಯತೆಯನ್ನೇ ಹೊಂದಿಲ್ಲ. ಅರ್ಜಿ ಕುರಿತು ಸಂವಿಧಾನದ ವಿವಿಧ ಪರಿಚ್ಛೇದಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳಿವೆ ಎಂದರು.
ವಾದ-ಪ್ರತಿವಾದ ಆಲಿಸಿದ ಪೀಠ, ಎಲ್ಲ ಪಕ್ಷಗಾರರ ವಕೀಲರ ಸಮ್ಮತಿ ಮೇರೆಗೆ ನ.25ರಂದು ಅರ್ಜಿಯ ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿದ್ರು. ಅಂದು ಎಲ್ಲಾ ಪಕ್ಷಗಾರರ ಪರ ವಕೀಲರು ವಾದ ಮಂಡನೆಗೆ ಸಿದ್ಧವಿರುವಂತೆ ಸೂಚಿಸಿ ವಿಚಾರಣೆ ಮುಂಡೂಡಿತು.
ಜಾತಿವಾರು ನಿಗಮ-ಮಂಡಳಿಗಳಿಗೆ ನೀಡಿರುವ ಅನುದಾನ
ಜಾತಿವಾರು ನಿಗಮ | ಮಂಜೂರಾದ ಮೊತ್ತ (ಕೋಟಿಗಳಲ್ಲಿ) | ಬಿಡುಗಡೆಯಾದ ಮೊತ್ತ | ನಿಗಮ ವೆಚ್ಚ ಮಾಡಿದ ಮೊತ್ತ | ಜಾತಿವಾರು ನಿಗಮ | ಮಂಜೂರಾದ ಮೊತ್ತ (ಕೋಟಿಗಳಲ್ಲಿ) | ಬಿಡುಗಡೆಯಾದ ಮೊತ್ತ | ನಿಗಮ ವೆಚ್ಚ ಮಾಡಿದ ಮೊತ್ತ |
ಡಾ.ಬಿ.ಆರ್.ಅಂಬೇಡ್ಕರ್ ನಿಗಮ | 3372 | 3330 | 3018 | ಸವಿತಾ ಸಮಾಜ ಅಭಿವೃದ್ಧಿ ನಿಗಮ | 7 | 3 | 1.98 |
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ | 1430 | 1430 | 1430 | ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | 500 | 100 | 72,39,331 ಲಕ್ಷ ರೂ. |
ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ | 2940 | 2660 | 2846 | ಭೋವಿ ಅಭಿವೃದ್ಧಿ ನಿಗಮ | 339 | 260 | 227 |
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ | 1661 | 1512 | 1517 | ಆದಿ ಜಾಂಬವ ಅಭಿವೃದ್ಧಿ ನಿಗಮ | 213 | 175 | 138 |
ತಾಂಡ ಅಭಿವೃದ್ಧಿ ನಿಗಮ ನಿಯಮಿತ | 862 | 808 | 808 | ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ | 30 | 25 | 18 |
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ | 139 | 119 | 103 | ಬ್ರಾಹ್ಮಣ ಅಭಿವೃದ್ಧಿ ಮಂಡಳಿ | 36 | 28 | 3 |
ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ | 22 | 22 | 16 | ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ | 16 | 16 | 15 |
ಮಡಿವಾಳ ಮಾಚಿದೇವ ನಿಯಮ ನಿಗಮಿತ | 30 | 26 | 23 |
ಇದನ್ನೂ ಓದಿ: ಘನತ್ಯಾಜ್ಯ ಘಟಕದಿಂದ ನದಿ ನೀರು ವಿಷ: ಪರೀಕ್ಷೆ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಹೈಕೋರ್ಟ್ ಆದೇಶ