ಬೆಂಗಳೂರು: ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವಿಟರ್ ಪೇಜಿನಲ್ಲಿ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ನಾಯಕರು ಇಂದು ದೂರು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ನೇತೃತ್ವದ ಬಿಜೆಪಿ ನಿಯೋಗವು ಕಾಂಗ್ರೆಸ್ ವಿರುದ್ಧ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಗೆ ದೂರು ಕೊಟ್ಟಿದೆ.
ಬಿ ಎಲ್ ಸಂತೋಷ್ ಹಾಗೂ ಪ್ರತಾಪ್ ಸಿಂಹ ಅವರ ಭಾವಚಿತ್ರಗಳನ್ನ ಸೇರಿಸಿ ಟೀಕೆ: ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರವಿಸುಬ್ರಹ್ಮಣ್ಯ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ತೇಜೋವಧೆ ಹೇಳಿಕೆ ನೀಡುತ್ತಾ ಬಂದಿದ್ದಾರೆ. ವಿನಾಕಾರಣ ನಮ್ಮ ನಾಯಕರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಹೊರಿಸುತ್ತಲೇ ಬಂದಿದೆ. ಬಿ ಎಲ್ ಸಂತೋಷ್ ಹಾಗೂ ಪ್ರತಾಪ್ ಸಿಂಹ ಅವರ ಭಾವಚಿತ್ರಗಳನ್ನ ಸೇರಿಸಿ ಮೌತ್ ಪೀಸ್ ಎಂದು ಟೀಕಿಸಿದ್ದಾರೆ ಎಂದರು.
''ಗ್ಯಾರಂಟಿ ಯೋಜನೆ ಅನುಷ್ಠಾನ ಸಾಧ್ಯವಾಗದಿದ್ದಕ್ಕೆ ಸುಖಾಸುಮ್ಮನೆ ಬಿಜೆಪಿ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ. ನಿನ್ನೆಯಷ್ಟೇ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಫ್ಯಾಕ್ಟ್ ಚೆಕ್ ಘಟಕ ತೆರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದರಂತೆ ಬಿಜೆಪಿ ನಾಯಕರ ವಿರುದ್ಧ ಮಾಡಿರುವ ಸುಳ್ಳು ಆಪಾದನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ'' ಎಂದು ಅವರು ತಿಳಿಸಿದರು.
''ಗ್ಯಾರಂಟಿ ಯೋಜನೆಗಳ ಅನುಷ್ಠಾನವಾಗದಿದಕ್ಕೆ ನಮ್ಮ ವಿರುದ್ಧ ವಿನಾಕಾರಣ ಕಾಂಗ್ರೆಸ್ ಟೀಕಿಸುತ್ತಿದೆ. ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆಗೆ ಹಿನ್ನಡೆಯಾಗಿದೆ. ಇದನ್ನು ಅರಿಯದ ಸಚಿವ ಸತೀಶ್ ಜಾರಕಿಹೊಳಿ ವೆಬ್ಸೈಟ್ ನ್ನೇ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಹೇಳಿಕೆ ನೀಡಿದ್ದಾರೆ. ಆಧಾರ ರಹಿತವಾಗಿ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ'' ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳನ್ನು ನಂಬಿ ಮತ ಹಾಕಿದ ಜನರಿಗೆ ಆ ಪಕ್ಷಗಳ ನಾಟಕ ನೋಡುವುದು ಅನಿವಾರ್ಯ : ಹೆಚ್ ಡಿ ಕುಮಾರಸ್ವಾಮಿ
ಇದನ್ನೂ ಓದಿ: ಸರ್ವರ್ ಹ್ಯಾಕ್ ವಿಚಾರ ರಾಜಕೀಯ ಉದ್ದೇಶದಿಂದ ಹೇಳಿದ್ದು: ಸತೀಶ್ ಜಾರಕಿಹೊಳಿ ಸ್ಪಷ್ಟನೆ