ಬೆಂಗಳೂರು: ಐಟಿ ಬಿಟಿ, ವೈದ್ಯಕೀಯ ಹಾಗೂ ಉನ್ನತ ಶಿಕ್ಷಣ ಮಂತ್ರಿಯಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು ನೂರು ದಿನ ಪೂರೈಸಿದ ಹಿನ್ನೆಲೆ ಇಂದು 'ಉತ್ತಮ ಆಡಳಿತ ದಿನಾಚರಣೆ'ಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉತ್ತಮ ಆಡಳಿತ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳ ಕರ್ತವ್ಯವನ್ನು ಶ್ಲಾಘಿಸಿದರು. ಹಾಗೂ 100 ದಿನ ಸುಸೂತ್ರವಾಗಿ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ಕೇವಲ ಐಟಿಬಿಟಿಯೆಡೆಗೆ ಗಮನ ಹರಿಸಿದರೆ ಸಾಲದು. ಎಲ್ಲಾ ಕ್ಷೇತ್ರಗಳು ಸಮಾನವಾಗಿ ಮುಖ್ಯವಾಗಿವೆ ಎಂದರು. ಜೊತೆಗೆ ಇತ್ತೀಚೆಗಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಕೆಲಸ ಮಾಡುವುದರಲ್ಲಿ ಆಸಕ್ತಿ ತೋರುತ್ತಿಲ್ಲ. ಅಷ್ಟೇ ಅಲ್ಲ, ಕೋರ್ಸ್ ಮುಗಿದ ನಂತರ ಯಾರೂ ಕೂಡ ಗ್ರಾಮ ಸೇವೆಗೆ ಸಿದ್ದರಿಲ್ಲ. ನಮ್ಮ ಯುವಕರಿಗೆ ವಿದೇಶಿ ವ್ಯಾಮೋಹ ಹೆಚ್ಚಿದೆ. ನಾವು ಹುಟ್ಟಿ ಬೆಳೆದ ದೇಶಕ್ಕೆ ನಮ್ಮ ಸೇವೆಯ ಅಗತ್ಯವಿದೆ ಎಂಬ ಕಿವಿಮಾತು ಹೇಳಿದರು. ಜೊತೆಗೆ ಸ್ಟೇ ಫಂಡ್ ಹೆಚ್ಚಿಸುವ ಕಡೆ ಗಮನ ಕೊಡ್ತೀನಿ ಎಂಬ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್, ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಸೇವೆಗೆ ಅನುಕೂಲ ಮಾಡಿಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.