ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ (ಬಿಎಂಎಸ್) ಸಂಘದವರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾನಿರತ ನೌಕರರನ್ನು ಭೇಟಿ ಮಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆ ಹಾಗೂ ಆರೋಗ್ಯ ವಿಮೆ ವಿಸ್ತರಣೆ ಮಾಡುವ ಬಗ್ಗೆ ಭರವಸೆ ನೀಡಿದರು. ನಂತರ ಪ್ರತಿಭಟನಾನಿರತರು ಮುಷ್ಕರ ವಾಪಸ್ ಪಡೆದರು.
ವೇತನ ಪರಿಷ್ಕರಣೆ 15% ಹೆಚ್ಚಳಕ್ಕೆ ಆರ್ಥಿಕ ಇಲಾಖೆಯಿಂದ ಸೂಕ್ತ ಕ್ರಮಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಶೀಘ್ರ ಆದೇಶ ಹೊರಡಿಸಲು ಕ್ರಮ ವಹಿಸುವುದಾಗಿ ಸಚಿವರು ಹೇಳಿದರು. ಅದೇ ರೀತಿ ವಿಮೆ ಸೌಲಭ್ಯ ಮತ್ತು ವೈದ್ಯಕೀಯ ಚಿಕಿತ್ಸೆ ಮರುಪಾವತಿ, ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ, ಜಿಲ್ಲೆಯಿಂದ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, 60 ವರ್ಷದವರೆಗೆ ಸೇವಾ ಭದ್ರತೆ, ಯಾರನ್ನೂ ಕೆಲಸದಿಂದ ತೆಗೆಯದ ಹಾಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನೌಕರರು ಬೇಡಿಕೆ ಇಟ್ಟಿದ್ದಾರೆ.
"ನಿಮ್ಮ ಪರ ಬರುವ ವಿಧಾನಸಭೆಯ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ" ಎಂದು ತಿಳಿಸಿದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ನೌಕರರ ಮನವೊಲಿಸಿದರು. ಮುಷ್ಕರವನ್ಮು ತಾತ್ಕಾಲಿಕ ವಾಪಸ್ ಪಡೆಯಲಾಗಿದೆ. ಆದೇಶ ಹೊರಡಿಸಲು ವಿಳಂಬ ಮಾಡಿದಲ್ಲಿ ಪುನಃ ಮುಷ್ಕರಕ್ಕೆ ಸಿದ್ದ ಎಂದು ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು: ಸಿಎಂ ಬೊಮ್ಮಾಯಿ