ಬೆಂಗಳೂರು: ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ನಂತರ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಮಳೆ, ಚಳಿ, ಶೀತಗಾಳಿ ಸ್ಥಿತಿಯಲ್ಲಿ ಜನರು ಯಾವ ರೀತಿ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಜನತೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ, ಶೀತ ಗಾಳಿ ಹಾಗೂ ಅತಿ ಕಡಿಮೆ ತಾಪಮಾನವು ವರದಿಯಾಗಿದ್ದು, ಈ ಪರಿಸ್ಥಿತಿಯು ಇನ್ನೂ ಅನೇಕ ದಿನಗಳು ಮುಂದುವರೆಯುವ ಸಾಧ್ಯತೆಯಿದೆ. ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತವು ಬಂಗಾಳಕೊಲ್ಲಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಹಿನ್ನೆಲೆಯಲ್ಲಿ ಹಾಗೂ ಮುಂಬರುವ ಚಳಗಾಲದ ದಿನಗಳಲ್ಲಿ ಸಾರ್ವಜನಿಕರು, ಮಕ್ಕಳು (ನವಜಾತ ಶಿಶುಗಳು ಸೇರಿದಂತೆ), ಗರ್ಭಿಣಿಯರು, ವೃದ್ಧರು, ವಿಶೇಷವಾಗಿ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿರುವ ಸಲಹೆಗಳನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಮಾಡಬೇಕಾದ್ದು ಹಾಗೂ ಮಾಡಬಾರದ ಕ್ರಮಗಳ ಪಟ್ಟಿ:
1. ಮಾಡಬೇಕಾದ್ದು (Do's)
- ಯಾವಾಗಲೂ ಬೆಚ್ಚಗಿನ ನೀರು/ಸೂಪ್‌ಗಳನ್ನು ಕುಡಿಯುವುದು.
- ಸುಲಭವಾಗಿ ಜೀರ್ಣವಾಗುವ ಹಾಗೂ ಆಗತಾನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು.
- ಯಾವಾಗಲೂ ಸ್ವೆಟರ್, ಸಾಕ್ಸ್ ಹಾಗೂ ಕೈಗವಸುಗಳನ್ನು ಧರಿಸುವುದು ಹಾಗೂ ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ.
- ಸ್ನಾನಕ್ಕೆ ಬಿಸಿ ನೀರು/ಬೆಚ್ಚಗಿನ ನೀರನ್ನು ಉಪಯೋಗಿಸುವುದು.
- ಅನಗತ್ಯವಾಗಿ ಹೊರ ಸಂಚಾರವನ್ನು ತಪ್ಪಿಸಿ.
- ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಿ ಅಥವಾ ಸ್ಕಾರ್ಫ್ ಕಟ್ಟಿಕೊಳ್ಳಿ ಹಾಗೂ ಹೋಗಲೇಬೇಕಾದಲ್ಲಿ ಮಾಸ್ಕ್ ಧರಿಸಬೇಕು.
- ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿರುವವರಿಂದ ದೂರವಿರಬೇಕು.
- ಮೊಣಕೈ ಒಳಗೆ ಸೀನುವುದು/ಕೆಮ್ಮುವುದು, ಅಥವಾ ಸೀನುವಾಗ/ಕೆಮ್ಮುವಾಗ ಟಿಶ್ಯೂ ಅಥವಾ ಕರವಸ್ತ್ರವನ್ನು ಬಳಸುವುದು.
- ಕೈಗಳನ್ನು ಆಗಾಗ್ಗೆ ನೀರು ಹಾಗೂ ಸೋಪಿನಿಂದ ತೊಳೆಯುವುದು.
- ಜ್ವರ ಲಕ್ಷಣಗಳು ಅಥವಾ ಇತರೆ ಯಾವುದಾದರೂ ಕಾಯಿಲೆಯ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು. ಸ್ವಯಂವೈದ್ಯ ಪದ್ಧತಿಗಳನ್ನು ಅನುಸರಿಸಬಾರದು.
2. ಮಾಡಬಾರದ್ದು (Don'ts )
- ತಣ್ಣಗಿನ ಪಾನೀಯಗಳು ಐಸ್ ಕ್ರೀಂಗಳನ್ನು ಸೇವಿಸಬಾರದು.
- ರೆಫ್ರಿಜರೇಟರ್‌ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು.
- ಮಳೆಯಲ್ಲಿ ನೆನೆಯುವುದನ್ನು ಹಾಗೂ ತಣ್ಣನೆಯ ಶೀತ ಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು.
- ಹೊರಾಂಗಣ ಪ್ರವಾಸಗಳನ್ನು ಆದಷ್ಟು ನಿರ್ಬಂಧಿಸಿ (ವಿಶೇಷವಾಗಿ ಗಿರಿಧಾಮಗಳಗೆ ವಾರಾಂತ್ಯದ ಪ್ರವಾಸ ಹೋಗುವುದು ಇತ್ಯಾದಿ)
- ಮಸಾಲಯುಕ್ತ ಪದಾರ್ಥಗಳು/ಜಂಕ್ ಫುಡ್‌ಗಳನ್ನು ವರ್ಜಿಸಬೇಕು.
ಈ ಕುರಿತಂತೆ, ಜಿಲ್ಲಾ ಮತ್ತು ಬಿಬಿಎಂಪಿ ಆರೋಗ್ಯ ಪ್ರಾಧಿಕಾರಗಳು, ತಮ್ಮ ವ್ಯಾಪ್ತಿಯಲ್ಲಿ ಜಾಗೃತಿಯನ್ನು ಮೂಡಿಸುವುದರ ಮೂಲಕ ಸದರಿ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಮ್ಯಾಂಡಸ್ ಚಂಡಮಾರುತದ ಎಫೆಕ್ಟ್: ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್