ಬೆಂಗಳೂರು: ಕೋವಿಡ್ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬರುವವರ ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್ ವಿಧಾನ ಅನುಸರಿಸಿ ಆಸ್ಪತ್ರೆಗೆ ದಾಖಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದೆ.
ಹಲವು ಪ್ರಕರಣಗಳಲ್ಲಿ ಆರ್ಟಿಪಿಸಿಆರ್ ಅಥವಾ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿದರೂ ನೆಗೆಟಿವ್ ವರದಿ ಬರುತ್ತಿದೆ. ವ್ಯಕ್ತಿಗೆ ಕೋವಿಡ್ ರೋಗ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬರುವುದರಿಂದ ರೋಗ ತೀವ್ರತೆ ಹೆಚ್ಚಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸುತ್ತಿರಲಿಲ್ಲ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಬಂದವರಿಗೆ ಮಾತ್ರ ಬಿಯು ಸಂಖ್ಯೆ ನೀಡಿ ಈ ಹಿಂದಿನ ಮಾರ್ಗಸೂಚಿಯಂತೆ ಅಂಥವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ, ಪಾಸಿಟಿವ್ ಬರದ ರೋಗಿಗಳಿಗೆ ಬಿಯು ಸಂಖ್ಯೆ ಇಲ್ಲದ ಕಾರಣ ಅವರನ್ನು ಬಹುತೇಕ ಆಸ್ಪತ್ರೆಗಳು ದಾಖಲಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ಹಲವರು ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯದೇ ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಿಂಡ್ರೋಮಿಕ್ ವಿಧಾನ ಅನುಸರಿಸಲು ತೀರ್ಮಾನಿಸಲಾಗಿದೆ. ಈ ವಿಧಾನದಲ್ಲಿ ಸಂಬಂಧಪಟ್ಟ ವೈದ್ಯರು ಅಥವಾ ವೈದ್ಯಾಧಿಕಾರಿಗಳು ರೋಗಿಗಳ ಸ್ಥಿತಿಯನ್ನು ಪ್ರಮಾಣೀಕರಿಸುತ್ತಾರೆ. ನಂತರ ರೋಗಿಗೆ ಪ್ರತ್ಯೇಕ ಸಂಖ್ಯೆ ನೀಡಿ ಗುರುತಿಸಿ, ನಿರ್ದಿಷ್ಟ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಲಾಗುತ್ತದೆ. ಆ ಮೂಲಕ ಕೊರೊನಾ ರೋಗಿ ಎಂದೇ ಪರಿಗಣಿಸಲಾಗುತ್ತದೆ.