ಬೆಂಗಳೂರು: ನಿನ್ನೆ ಕನ್ನಡ ರಾಜ್ಯೋತ್ಸವ ದಿನವಾದರೂ ಕೂಡ ಕನ್ನಡಪರ ಸಂಘಟನೆಗಳು ರಸ್ತೆಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವೆ.
ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಮತ್ತು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಮನವಿ ಮಾಡಿದರು.
ಬ್ಯಾಂಕಿಂಗ್, ಐಟಿಬಿಟಿ, ಮತ್ತು ರೈಲ್ವೆ ಇಲಾಖೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ನಿಯಮ ರೂಪಿಸಿ. ಮಹಿಷಿ ವರದಿಯನ್ನು ಜಾರಿಗೆ ತನ್ನಿ. ನಮ್ಮ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಸರ್ಕಾರ ಮನಸ್ಸು ಮಾಡಬೇಕಿದೆ ಎಂದರು.
ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ನವೆಂಬರ್ 4ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ ಮಾಡುತ್ತೇವೆ. ಸಿನಿಮಾ ನಟರು ಮತ್ತು ಸಾಹಿತಿಗಳು ಸೇರಿದಂತೆ ಸ್ವಾಮೀಜಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಇದು ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಎಂದು ಕನ್ನಡ ಹೋರಾಟಗಾರ ನಾಗೇಶ್ ಹೇಳಿದರು.