ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಮೂಲ ಬಿಜೆಪಿಯ ಕೆಲ ಶಾಸಕರು ಪ್ರತ್ಯೇಕ ಸಭೆ ನಡೆಸಿದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಸಭೆ ಮೂಲಕ ಸಿಎಂಗೆ ರವಾನಿಸಿದರು.
ಬಜೆಟ್ ಸಿದ್ಧತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬ್ಯುಸಿಯಾಗಿದ್ದರೆ, ಬಿಜೆಪಿ ಶಾಸಕರ ತಂಡವೊಂದು ಸಚಿವ ಸ್ಥಾನಕ್ಕಾಗಿ ಪ್ರತ್ಯೇಕ ಸಭೆ ನಡೆಸುವಲ್ಲಿ ಬ್ಯುಸಿಯಾಗಿ ಗಮನ ಸೆಳೆದಿದೆ. ಶಾಸಕರ ಭವನದಲ್ಲಿ ಸುರಪುರ ಶಾಸಕ ರಾಜುಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಶಾಸಕರು, ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅವಕಾಶ ಬೇಕು. ಆರು ಜಿಲ್ಲೆಗಳಿಗೆ ಸೇರಿ ಒಂದೇ ಸ್ಥಾನ ಇದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ ಒಂದೇ ಸ್ಥಾನ ನೀಡಿ ಕಡೆಗಣನೆ ಮಾಡಲಾಗಿದೆ. ಸದ್ಯ ಪ್ರಭು ಚೌಹಾಣ್ ಮಾತ್ರ ಸಂಪುಟದಲ್ಲಿ ಇದ್ದು, ಈವರೆಗೆ ಯಾವುದೇ ಸರ್ಕಾರ ಬಂದರೂ ಈ ಭಾಗದ ಐದರಿಂದ ಆರು ಸಚಿವರು ಇರುತ್ತಿದ್ದರು. ಈಗ ಒಂದು ಸ್ಥಾನ ಮಾತ್ರ ನೀಡಲಾಗಿದೆ. ಈಗಲೂ ಆನಂದ್ ಸಿಂಗ್ ಅವರಿಗೆ ರಾಜೀನಾಮೆ ಕೊಟ್ಟು ಬಂದ ಕಾರಣಕ್ಕೆ ಕಾರಣಕ್ಕೆ ಸಚಿವ ಸ್ಥಾನ ಕೊಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗ ಎನ್ನುವ ಕಾರಣಕ್ಕೆ ಅಲ್ಲವೆಂದು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.
ಈ ಬಾರಿಯ ಸಂಪುಟ ವಿಸ್ತರಣೆ ವೇಳೆ 10+3 ಸೂತ್ರದಂತೆ 3 ಸ್ಥಾನದಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಒಂದು ಸ್ಥಾನವನ್ನಾದರೂ ನೀಡಬೇಕು ಎಂದು ಮುಖ್ಯಮಂತ್ರಿ ಬಿಎಸ್ವೈ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ಅವರನ್ನು ಒತ್ತಾಯಿಸುವ ನಿರ್ಧಾರಕ್ಕೆ ಶಾಸಕರ ತಂಡ ಬಂದಿದೆ ಎನ್ನಲಾಗ್ತಿದೆ.