ಬೆಂಗಳೂರು: ಸರ್ಕಾರ ಪಿಒಪಿ ಗಣೇಶ ತಯಾರಿಕೆಯನ್ನು ಬ್ಯಾನ್ ಮಾಡಿದ್ರೂ, ಕೆಲವೊಂದು ಕಡೆ ಪಿಒಪಿ ಗಣೇಶನ ವಿಗ್ರಹಕ್ಕೆ ಬೇಡಿಕೆ ಇದೆ. ಆದ್ರೆ ಅದರ ಅಬ್ಬರದಲ್ಲೂ ಮಣ್ಣಿನ ಗಣೇಶನ ವಿಗ್ರಹ ತಯಾರಕರಿಗೆ ಬೇಡಿಕೆ ಕುಂದಿಲ್ಲ. ಇಲ್ಲೊಂದು ಕುಟುಂಬ ವಂಶಪಾರಂಪರ್ಯವಾಗಿ ಮಣ್ಣಿನ ಗಣಪತಿಯನ್ನು ತಯಾರಿಸುತ್ತಿದೆ. ಅಷ್ಟಕ್ಕೂ ಈ ಕುಟುಂಬ ಯಾವುದು ಅಂತಿರಾ..? ಹಾಗಾದ್ರೆ ಈ ಸ್ಟೋರಿ ನೋಡಿ..
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರ ಪಟ್ಟಣದ ರಾಜ್ ಗೋಪಾಲ್ ಕುಟುಂಬ ವಂಶಪಾರಂಪರ್ಯವಾಗಿ ಮಣ್ಣಿನ ಗಣಪತಿಗಳನ್ನು ಮಾಡುತ್ತಾ, ಪರಿಸರ ಕಾಳಜಿ ಪ್ರದರ್ಶಿಸುತ್ತಿದೆ. ಪೂರ್ವಿಕರ ಪರಂಪರೆಯನ್ನು ಇಂದಿಗೂ ಮುಂದುವರೆಸಿ, ಆಧುನಿಕತೆಯ ಸೋಂಕಿಗೆ ತಮ್ಮ ಕಾಯಕವನ್ನು ಬಲಿ ಕೊಡದೆ ಮಣ್ಣಿನಿಂದಲೇ ಗಣಪತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಗಣೇಶ ಚತುರ್ಥಿ ವೇಳೆ ಜನರಿಗೆ ಪ್ರತಿ ವರ್ಷವೂ ಮಣ್ಣಿನ ಗಣೇಶನನ್ನು ನೀಡಬೇಕೆಂಬ ಆಸೆಯೊಂದಿಗೆ ವಿಗ್ರಹ ತಯಾರಿಕೆಯ ಕಾಯಕ ಮಾಡುತ್ತಿರುವುದು ಈ ಕುಟುಂಬದ ವಿಶೇಷ. ತಂದೆಯ ಕಾಲದಿಂದಲೂ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ಹಬ್ಬ ಇನ್ನೂ ಮೂರು ತಿಂಗಳು ಇರುವುದರೊಳಗಾಗಿ ಮೂರ್ತಿಗಳನ್ನು ತಯಾರಿಸಲು ಆರಂಭಿಸುತ್ತೇವೆ. ಪಿಒಪಿ ಗಣೇಶನ ತಯಾರಿಕೆ ಬ್ಯಾನ್ ಮಾಡಿ, ಬೇಡಿಕೆ ಇರುವಂತಹ ಮಣ್ಣಿನ ಮೂರ್ತಿಗೆ ಉತ್ತೇಜನ ನೀಡಬೇಕು ಎಂದು ರಾಜ್ ಗೋಪಾಲ್ ಮಗ ವರುಣ್ ಹೇಳುತ್ತಾರೆ.
ರಾಜ್ ಗೋಪಾಲ್ ಕುಟುಂಬದವರು ತುಂಬಾ ವರ್ಷಗಳಿಂದ ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಇಲ್ಲೇ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ಅಲ್ಲದೇ ನಮ್ಮ ಸುತ್ತಮುತ್ತಲಿನ ನೂರಾರು ಜನರು ಇವರ ಬಳಿಯೇ ಮಣ್ಣಿನ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಹಬ್ಬವನ್ನು ಆಚರಿಸುತ್ತಾರೆ. ಇದ್ರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಗ್ರಾಹಕ ರಾಮಕೃಷ್ಣ ಹೆಗಡೆಯವರ ಮಾತಾಗಿದೆ..
ಸರ್ಕಾರ ಪಿಒಕೆ ಗಣೇಶನ ಮೂರ್ತಿಗಳು ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ ಎಂದು ಬ್ಯಾನ್ ಮಾಡಿರುವುದು ಗಣೇಶ ವಿಗ್ರಹ ವ್ಯಾಪಾರಿಗಳಲ್ಲಿ ಅಸಮಾಧಾನ ಮೂಡಿಸಿದೆ. ಇದರ ನಡುವೆ ಪಿಒಪಿ ಗಣೇಶ ವಿಗ್ರಹಗಳನ್ನು ಬ್ಯಾನ್ ಮಾಡ್ಲಿ, ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇದೆ ಎಂದು ಹೇಳುವ ಮೂಲಕ ಈ ಕುಟುಂಬ ಪರಿಸರ ಕಾಳಜಿ ತೋರುತ್ತಿದೆ.