ಬೆಂಗಳೂರು: ಕೊರೊನಾ ಸೋಂಕು ಕಡಿಮೆ ಆಗ್ತಿದೆ, ಲಾಕ್ ಆಗಿದ್ದ ಚಟುವಟಿಕೆಗಳು ಅನ್ಲಾಕ್ ಆಗ್ತಿವೆ. ಇನ್ಮುಂದೆ ಯಾವ ಭಯನೂ ಇಲ್ಲಪ್ಪ, ಮಾಸ್ಕ್ ಹಾಕೊಂಡ್ರು ಓಕೆ, ಹಾಕದೇ ಇದ್ದರೂ ಓಕೆ ಅಂತ ಅಡ್ಡಾದಿಡ್ಡಿ ಓಡಾಟ ಮಾಡುವ ಮೊದಲು ಎಚ್ಚರಿಕೆಯ ಹೆಜ್ಜೆಯನ್ನ ಇಡಬೇಕು. ಯಾಕೆಂದರೆ ರಾಜ್ಯದಲ್ಲಿ ಎಲ್ಲಾ ತಳಿಗಳ ಸೋಂಕು ಕಾಡಲು ಶುರು ಮಾಡಿದ್ದು, ಅದರಲ್ಲೂ ಮುಖ್ಯವಾಗಿ ಭಾರತೀಯ ರೂಪಾಂತರಿ ವೈರಸ್ ಡೆಲ್ಟಾ ಓವರ್ ಟೇಕ್ ಮಾಡ್ತಿದೆ. ಎರಡನೇ ಅಲೆಯಲ್ಲಿ ಆಲ್ಫಾ, ಬೀಟಾ ರೂಪಾಂತರಿಯನ್ನೂ ಮೀರಿಸಿದೆ. ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ನಲ್ಲಿ ಅತೀ ಹೆಚ್ಚು ಪತ್ತೆಯಾಗ್ತಿರೋದು ಡೆಲ್ಟಾ ವೈರಸ್.
ಮೇ ತಿಂಗಳ ಸ್ಯಾಂಪಲ್ಸ್ಗಳನ್ನ ನಿಮ್ಹಾನ್ಸ್ ಲ್ಯಾಬ್ ಹಾಗೂ ಎನ್ಸಿಬಿಎಸ್ ಲ್ಯಾಬ್ನಲ್ಲಿ ಸೀಕ್ವೇನ್ಸಿಂಗ್ ಮಾಡಿದಾಗ ಅತಿ ಹೆಚ್ಚು ಡೆಲ್ಟಾ ವೈರಸ್ ಪತ್ತೆಯಾಗಿದೆ. ಎರಡನೇ ಅಲೆಯಲ್ಲಿ ಶೇ. 60 ಕ್ಕಿಂತ ಅಧಿಕ ಪ್ರಕರಣಗಳು ಡೆಲ್ಟಾ ರೂಪಾಂತರಿ ಎಂದು ತಜ್ಞರು ಅಂದಾಜಿಸಿದ್ದು, ಬೆಂಗಳೂರಿನಲ್ಲಿ ಹೆಚ್ಚಾಗಿ ಹರಡಿರುವುದು ಕಂಡು ಬಂದಿದೆ. ಇಲ್ಲಿಯವರೆಗೆ ಮಾಡಿರುವ ಜೀನೋಮ್ ಸೀಕ್ವೆನ್ಸಿಂಗ್ನಲ್ಲಿ ಒಟ್ಟು 725 ಪ್ರಕರಣಗಳು ಡೆಲ್ಟಾ ರೂಪಾಂತರಿ ಇರುವುದು ಪತ್ತೆಯಾಗಿದೆ. ಇದರಲ್ಲಿ 525 ಪ್ರಕರಣಗಳು ಬೆಂಗಳೂರು ಒಂದರಲ್ಲೇ ಅನ್ನೋದು ಆತಂಕದ ವಿಷಯ..
ಕೊರೊನಾ ಸೋಂಕಿಗಿಂತ ರೂಪಾಂತರಿಗಳ ಪವರ್ ಜಾಸ್ತಿ:
ರೂಪಾಂತರಿ ಸೋಂಕನ್ನು ನಿರ್ಲಕ್ಷ್ಯಿಸಿದರೆ ಮೂರನೇ ಅಲೆಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತೆ.ಇದರಿಂದ ಅಂದಾಜು ಸಿಗದಷ್ಟು ದೊಡ್ಡ ಹಾನಿಯೇ ಆಗಬಹುದು. ಮೂಲ ಕೊರೊನಾ ಸೋಂಕು ಎಲ್ಲ ದೇಶಗಳಿಗೂ ಹರಡಿ, ಅಲ್ಲಿನ ಪ್ರಾದೇಶಿಕವಾರು ವಾತಾವರಣಕ್ಕೆ ಹೊಸ ತಳಿಯಾಗಿ ಬದಲಾಗಿದೆ. ಹೀಗಾಗಿ, ಮೂಲ ಕೊರೊನಾ ಸೋಂಕಿಗಿಂತ ರೂಪಾಂತರಿ ತಳಿಗಳ ಹರಡುವಿಕೆ, ಹಾನಿ ಪ್ರಮಾಣ ಎಲ್ಲವೂ ಹೆಚ್ಚಾಗಿರುತ್ತೆ..ಸೋಂಕು ತಗುಲಿದವರಿಗೆ ನೇರವಾಗಿ ಶ್ವಾಸಕೋಶಕ್ಕೆ ಹಾನಿ ಮಾಡುತ್ತೆ. ಆಕ್ಸಿಜನ್ ಹಾಗೂ ವೆಂಟಿಲೇಟರ್ ಅವಶ್ಯಕತೆ ಕೊಂಚ ಹೆಚ್ಚಾಗಿ ಇರುತ್ತೆ. ಎರಡನೇ ಅಲೆಯಲ್ಲಿ ಹೆಚ್ಚು ಸಾವು ಸಂಭವಿಸಿದ್ದು ಡೆಲ್ಟಾ ಸೋಂಕಿನಿಂದಲೇ ಅನ್ನೋದು ಇದರ ತೀವ್ರತೆ ಹೇಗಿತ್ತು ಅನ್ನೋದಕ್ಕೆ ಸಾಕ್ಷಿ.
ರೂಪಾಂತರಿ ವೈರಾಣು ಪತ್ತೆಗೆ ಲ್ಯಾಬ್ ನಿರ್ಮಾಣ:
ಎರಡನೇ ಅಲೆಯಲ್ಲಿ ಬಂದ ರೂಪಾಂತರಿ ವೈರಾಣು ಪತ್ತೆಗೆ 7 ಕಡೆ ಜಿನೋಮಿಕ್ ಲ್ಯಾಬ್ಗಳನ್ನ ತೆರೆಯಲಾಗುತ್ತಿದೆ. 5 ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆಯಡಿ ಮಂಗಳೂರು ವೆನ್ಲಾಕ್ ಹಾಗೂ ವಿಜಯಪುರದ ಆಸ್ಪತ್ರೆ ಸೇರಿದಂತೆ 7 ಕಡೆ ಲ್ಯಾಬ್ ಆರಂಭಿಸಲಾಗುತ್ತಿದೆ. ಈಗಾಗಲೇ ಇದಕ್ಕೆ ಬೇಕಾದ ತಯಾರಿ ನಡೆಸಲಾಗುತ್ತಿದೆ. ವಂಶವಾಹಿ ಪತ್ತೆಯಿಂದಾಗಿ ಸೋಂಕಿನ ಸ್ವಭಾವ ಅಧ್ಯಯನ ಮಾಡಲು ಹಾಗೂ ಹೊಸ ರೂಪಾಂತರಿ ಪತ್ತೆಯಾಗಿದ್ದರೆ ಅದನ್ನ ತಿಳಿಯುವುದರ ಜೊತೆಗೆ ಚಿಕಿತ್ಸೆ ನೀಡಲು ತೀರ್ಮಾನಿಸಲಾಗುತ್ತೆ.
ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈನಲ್ಲೇ :
ಅಂದಹಾಗೇ, ರಾಜ್ಯದಲ್ಲಿ ನಿಧಾನವಾಗಿ ಆನ್ ಲಾಕ್ ಮಾಡಲಾಗುತ್ತಿದೆ. ಹೀಗಾಗಿ, ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮದೇ ಹೊಣೆಯಾಗಿರುತ್ತೆ. ಪಾಶ್ಚಿಮಾತ್ಯ ದೇಶಗಳಲ್ಲಿ ಡೆಲ್ಟಾ ಸೋಂಕು ಕಂಟ್ರೋಲ್ ತಪ್ಪಿದೆ. ಪಕ್ಕಾದ ಮಹಾರಾಷ್ಟ್ರ-ಕೇರಳದಲ್ಲೂ ಸೋಂಕು ತೀವ್ರತೆ ಜೋರಾಗಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಡೇಂಜರ್ ಡೆಲ್ಟಾದಿಂದ ಎಚ್ಚರಿಕೆ ಕ್ರಮವೇನು?
- ಅನ್ ಲಾಕ್ ಆಯ್ತು ಅಂತ ಮೈಮರೆತು ಅನಗತ್ಯ ಓಡಾಟ ಬೇಡ.
- ಜನಸಮೂಹ ಇರುವ ಪ್ರದೇಶಗಳಲ್ಲಿ ಸೇರುವುದನ್ನು ಕಡಿಮೆ ಮಾಡುವುದು.
- ಡಬಲ್ ಮಾಸ್ಕ್ ಧರಿಸುವುದು
- ಸಾಮಾಜಿಕ ಅಂತರ ಪಾಲಿಸುವುದು.
- ಪೌಷ್ಠಿಕ ಆಹಾರ ಹಾಗೂ ರೋಗನಿರೋಧ ಶಕ್ತಿ ಹೆಚ್ಚಿಸುವ ಆಹಾರ ಸೇವನೆ
- ಶುಚಿತ್ವದ ಕಡೆ ಹೆಚ್ಚಿನ ಗಮನಹರಿಸುವುದು.
- ಕೋವಿಡ್ ಲಸಿಕೆ ಪಡೆಯುವುದು.
- ಸರ್ಕಾರ ಹೊರಡಿಸಿರುವ ಕೊರೊನಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸುವುದು
- ಅನಾರೋಗ್ಯ ಸಮಸ್ಯೆ ಕಂಡು ಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸುವುದು..
ಯಾವ್ಯಾವ ರೂಪಾಂತರ ಎಷ್ಟಿದೆ?
1)ಡೆಲ್ಟಾ ( Delta/B.617.2) -725
2)ಅಲ್ಫಾ(Alpha/B.1.1.7) - 140
3)ಕಪ್ಪಾ (Kappa/B.1.617) 145
4)ಬೇಟಾ ವೈರಸ್ (BETA/B.1.351) -6
5)ಡೆಲ್ಟಾ ಪ್ಲಸ್( Delta plus/ B.1.617.2.1(AY.1) - 2