ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆಯ ಆವೈಜ್ಞಾನಿಕ ಆದೇಶದದಿಂದ ಕರ್ನಾಟಕದ ರೈತರಿಗೆ ಮತ್ತು ಜನರಿಗೆ ಆಗುವ ಸಂಕಷ್ಟವಾಗಿದೆ. ಈ ಕುರಿತು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಲು ನಾಳೆ ಜಲ ಸಂರಕ್ಷಣ ಸಮಿತಿಯ ನಿಯೋಗ ದೆಹಲಿಗೆ ತೆರಳಲಿದೆ ಎಂದು ಕರ್ನಾಟಕ ಜಲ ಸಂರಕ್ಷಣ ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯದಲ್ಲಿ ಅಗಿರುವ ಅನ್ಯಾಯವನ್ನು ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಜಲ ಸಂರಕ್ಷಣ ಸಮಿತಿಯ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ "ನಿರಂತರವಾಗಿ ರೈತರನ್ನು ಸರ್ಕಾರ ಆತ್ಮಹತ್ಯೆಗೆ ತಳ್ಳುತ್ತಿದೆ" ಎಂಬ ಅಣಕು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್ ಕಾವೇರಿ ನೀರು ನಿರ್ವಹಣ ಮಂಡಳಿಯು, ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲದ ಭೀತಿಯಲ್ಲಿ ಇರುವುದನ್ನು ಅರ್ಥ ಮಾಡಿಕೊಳ್ಳದೆ. ನಿರಂತರ 3000 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಆದೇಶದಿಂದ ಕರ್ನಾಟಕದ ಜನರಿಗೆ ಕುಡಿಯುವ ನೀರಿಗೂ ಸಂಕಷ್ಟ ಉಂಟಾಗುತ್ತಿದೆ. ರೈತರ ಬದುಕು ಬೀದಿಪಾಲಾಗುತ್ತಿದೆ, ಬರಗಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಲಸೆ ಹೋಗುತ್ತಿದ್ದಾರೆ ಎಂದು ರೈತರ ಸಂಕಷ್ಟವನ್ನು ಬಿಚ್ಚಿಟ್ಟರು.
ಈ ಬಗ್ಗೆ ಸಂಬಂಧಪಟ್ಟವರಿಗೆ ರಾಜ್ಯದ ಸಂಕಷ್ಟ ಮನವರಿಕೆ ಮಾಡಿಕೊಡಲು ಕರ್ನಾಟಕ ಜಲ ಸಂರಕ್ಷಣ ಸಮಿತಿ ನಿಯೋಗ ದೆಹಲಿಗೆ ತೆರಳುತ್ತಿದೆ. ಅಕ್ಟೋಬರ್ 9 ಮತ್ತು 10 ರಂದು ಸಂಬಂಧಪಟ್ಟವರನ್ನು ಭೇಟಿ ಮಾಡಿ ಆದೇಶ ರದ್ದುಪಡಿಸಲು ಒತ್ತಾಯಿಸಲಾಗುವುದು. ರಾಷ್ಟ್ರಪತಿಗಳ ಭೇಟಿಗೂ ಸಮಯ ಕೇಳಲಾಗಿದೆ. ಅನುಮತಿ ದೊರೆತರೆ ಅವರಿಗೂ ವಸ್ತು ಸ್ಥಿತಿಯನ್ನು ವಿವರಿಸಲಾಗುತ್ತದೆ ಎಂದು ಕುರುಬೂರು ತಿಳಿಸಿದರು.
ಕೇಂದ್ರದ ಬರ ಅಧ್ಯಯನ ತಂಡ ಕೆಲವು ಜಿಲ್ಲೆಗಳಲ್ಲಿ ಕಾಟಚಾರದ ಬರ ವೀಕ್ಷಣೆ ಮಾಡಿದೆ. ರೈತರ ಸಂಕಷ್ಟ ಕೇಳಿಲ್ಲ. ಕರ್ನಾಟಕದ 195 ತಾಲೂಕುಗಳಲ್ಲಿನ ಬರಗಾಲದಿಂದ ರೈತರ ಬೆಳೆಗಳು ಹಾಳಾಗಿವೆ. ಸುಮಾರು 40 ಲಕ್ಷ ಹೆಕ್ಟೇರ್ ನಲ್ಲಿ 30,000 ಕೋಟಿ ರೂ. ರೈತರಿಗೆ ನಷ್ಟ ಉಂಟಾಗಿದೆ. ಇದನ್ನು ಗಮನಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಂಪೂರ್ಣ ನಷ್ಟವನ್ನು ತುಂಬಿಕೊಡಬೇಕಿದೆ. ನಿರ್ಲಕ್ಷ್ಯ ಮಾಡಿ ಭಿಕ್ಷಾ ರೂಪದ ಪರಿಹಾರ ನೀಡಿದರೆ ಜಿಲ್ಲಾ ಮಂತ್ರಿಗಳ ಸಮ್ಮುಖದಲ್ಲಿ ಪರಿಹಾರದ ಚೆಕ್ ಸುಡುವ ಕಾರ್ಯಕ್ರಮ ಮಾಡಬೇಕಾಗುತ್ತದೆ ಎಂದು ಶಾಂತಕುಮಾರ ಎಚ್ಚರಿಕೆ ರವಾನಿಸಿದರು.
ಕೃಷಿ ಪಂಪ್ ಸೆಟ್ಗಳಿಗೆ 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಈಗಿನ ರಾಜ್ಯ ಸರ್ಕಾರ ಈಗ ಕೇವಲ 2 ಗಂಟೆ ವಿದ್ಯುತ್ ನೀಡುತ್ತಿದೆ. ಮಳೆ ಬಾರದೆ ಬರಗಾಲದ ಜೊತೆಗೆ ವಿದ್ಯುತ್ ಅಭಾವ ಸೃಷ್ಟಿಸಿ ರೈತರನ್ನು ಕಾಡುತ್ತಿದೆ. ಸರ್ಕಾರ ವಿದ್ಯುತ್ ಸಹಾಯಧನ ಕಡಿತ ಮಾಡಿ ಸುಮಾರು ಹತ್ತು ಸಾವಿರ ಕೋಟಿ ರೂ. ಉಳಿಸಿ ಗ್ಯಾರೆಂಟಿ ಯೋಜನೆಗೆ ಬಳಸಿಕೊಳ್ಳಲು ಈ ಕಾರ್ಯ ಮಾಡುತ್ತಿದೆ. ಸದಾ ರೈತರ ಹೆಸರು ಹೇಳುತ್ತಲೇ ರೈತರಿಗೆ ಪಂಗನಾಮ ಹಾಕುತ್ತಿದೆ. ರೈತರು ಪಕ್ಷಗಳ ರಾಜಕೀಯ ಬಿಟ್ಟು ಜಾಗೃತರಾಗಬೇಕು ಎಂದು ಶಾಂತಕುಮಾರ್ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹತ್ತಳ್ಳಿದೇವರಾಜ್, ಕನ್ನಡ ಚಳುವಳಿಯ ಗುರುದೇವ ನಾರಾಯಣ, ಮೋಹನ್, ಬರಡನಪುರ ನಾಗರಾಜ್, ರಮೇಶ್ ಉಗಾರ್, ಗುರುಸಿದ್ದಪ್ಪ, ಪರಶುರಾಮ್ ಎತ್ತಿನಗುಡ್ಡ, ಎಸ್ ಬಿ ಸಿದ್ನಾಳ, ರಾಜೇಶ್ ಬಸವರಾಜ ಪಾಟೀಲ್, ವಕೀಲ ಕಿಸಾನ್, ಕಮಲಮ್ಮ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಇದನ್ನೂ ಓದಿ : ಧಾರವಾಡ: ಹಸಿರು ಬರ, ಹಾನಿ ಪರಿಶೀಲಿಸಿದ ಕೇಂದ್ರ ತಂಡ; ಮಳೆ ಕೊರತೆಯಿಂದ ಶೇ.91ರಷ್ಟು ಬೆಳೆ ನಷ್ಟ- ಡಿಸಿ