ಬೆಂಗಳೂರು: ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಬರುವವರೆಗೆ ದೆಹಲಿಗೆ ತೆರಳುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದು, ಇದರಿಂದ ಗೆದ್ದ ತಕ್ಷಣ ಮಂತ್ರಿಯಾಗುತ್ತೇವೆ ಅಂದುಕೊಂಡಿದ್ದ ನೂತನ ಶಾಸಕರು ಸಚಿವ ಸ್ಥಾನಕ್ಕಾಗಿ ಇನ್ನೂ ಕೆಲ ದಿನ ಕಾಯಾಬೇಕಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಸತ್ ಅಧಿವೇಶನ ಮತ್ತು ತ್ರಿಪುರ ಚುನಾವಣೆಯಲ್ಲಿ ಬ್ಯುಸಿ ಆಗಿರುವುದರಿಂದ ಸಿಎಂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಸದ್ಯಕ್ಕೆ ದೆಹಲಿಗೆ ಹೋಗುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ನಾಲ್ಕೈದು ದಿನಗಳ ಬಳಿಕ ಯಡಿಯೂರಪ್ಪ ದೆಹಲಿಗೆ ಹೋಗಲಿದ್ದು, ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ದೆಹಲಿಗೆ ಹೋಗಿ ಬಂದ ಬಳಿಕವಷ್ಟೇ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದ್ದು, ಉಪ ಚುನಾವಣೆಯಲ್ಲಿ ಗೆದ್ದಿರುವ ಹನ್ನೆರಡು ಮಂದಿ ಶಾಸಕರಲ್ಲಿ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದು ಗೊತ್ತಾಗಲಿದೆ.
ಸಿಎಂ ಬೆನ್ನು ಬಿದ್ದಿರುವ ನೂತನ ಶಾಸಕರು: ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ನೂತನ ಶಾಸಕರು ಸಿಎಂ ಬಿಎಸ್ವೈ ಬೆನ್ನು ಬಿದ್ದಿದ್ದು, ಕೆಲ ಶಾಸಕರು ಪ್ರತೀ ಕಾರ್ಯಕ್ರಮದಲ್ಲೂ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಹೆಬ್ಬಾಳದಲ್ಲಿ ನಡೆದ ಪಶುಪಾಲನಾ ಮತ್ತು ಪಶುವೈದ್ಯಕೀಯ ಭವನ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಯ್ಯ ಸಿಎಂ ಜೊತೆ ವೇದಿಕೆ ಹಂಚಿಕೊಂಡರು. ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಶಾಸಕರಾಗಿರುವ ಗೋಪಾಲಯ್ಯ ಈಗಾಗಲೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಿಎಂ ಹೋದ ಕಡೆಗಳಲ್ಲಿ ಅವರ ಜೊತೆ ತಿರುಗಾಡ್ತಿರುವ ಗೋಪಾಲಯ್ಯ, ಈ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.