ಬೆಂಗಳೂರು: ಬಿಬಿಎಂಪಿಯ ಜಯನಗರದ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಸಕಾಲ ಸೇವೆಗಳ ಅರ್ಜಿ ಸ್ವೀಕೃತಿ ವ್ಯವಸ್ಥೆ ಬಗ್ಗೆ ಸಕಾಲ ಮಿಷನ್ ಅಪರ ನಿರ್ದೇಶಕಿ ಡಾ. ಬಿ.ಆರ್.ಮಮತಾ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ, ಸಕಾಲ ವ್ಯವಸ್ಥೆಯಡಿ ಬಂದಿರುವ ಅರ್ಜಿಗಳು ವಿಲೇವಾರಿಯಾಗದೆ ವರ್ಷಗಳಿಂದಲೇ ಬಾಕಿ ಇವೆ. ಪ್ರತೀ ಶನಿವಾರ ಅಥವಾ ಸೋಮವಾರ ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಖಾತಾ ನೋಂದಣಿಗೆ ಕುರಿತ ಕಡತಗಳೇ ಶೇ. 69ರಷ್ಟು ಬಾಕಿ ಇವೆ. ಅಲ್ಲದೆ ಹಲವಾರು ಸೇವೆಗಳಿಗೆ ಸಕಾಲದಡಿ ಅರ್ಜಿ ಸ್ವೀಕರಿಸದೆ ತಿರಸ್ಕಾರ ಮಾಡಲಾಗಿದೆ. ಈ ತಿರಸ್ಕಾರಕ್ಕೆ ಕಾರಣ ನೀಡಬೇಕೆಂದು ತಾಕೀತು ಮಾಡಿದರು.
ನಿಯಮ ಪ್ರಕಾರ 30 ದಿನದೊಳಗೆ ಸಕಾಲದಲ್ಲಿ ಕಡತಗಳ ವಿಲೇವಾರಿ ಆಗಬೇಕು. ಖಾತಾ ಬದಲಾವಣೆ, ನೋಂದಣಿ, ಸರ್ವೇ, ಸೋಷಿಯಲ್ ಸೆಕ್ಯೂರಿಟಿ ಸ್ಕೀಮ್ಗಳ ಕಡತಗಳನ್ನು ಸ್ವೀಕರಿಸಿ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಆದರೆ ಪಾಲಿಕೆ ಅಧಿಕಾರಿಗಳ ವಿಳಂಬ ಧೋರಣೆ ಕಂಡು ಸಕಾಲ ಅಪರ ನಿರ್ದೇಶಕರು ತರಾಟೆಗೆ ತೆಗೆದುಕೊಂಡರು.
ಕೋವಿಡ್ ನೆಪ ಹೇಳಿದ ಅಧಿಕಾರಿಗಳು, ಇದಕ್ಕಾಗಿ ಕಡತ ವಿಲೇವಾರಿ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು. ಕಚೇರಿಯಲ್ಲಿ ಶೇ. 35ರಷ್ಟು ಕಡತ ರಿಜೆಕ್ಟ್ ಆಗಿವೆ. ಕೆಲಸದಿಂದ ತಪ್ಪಿಸಿಕೊಳ್ಳಲು ಅರ್ಜಿಯೇ ತಿರಸ್ಕಾರ ಮಾಡಿರುವ ಕೆಲವು ಪ್ರಕರಣಗಳ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಪರಿಶೀಲನೆ ಬಳಿಕ ಮಾತನಾಡಿದ ಅಪರ ನಿರ್ದೇಶಕಿ ಮಮತಾ, ಸಕಾಲ ಅರ್ಜಿ ವಿಲೇವಾರಿ ತಡವಾಗಿದೆ ಅಂತ ಮತ್ತೊಂದು ಅರ್ಜಿಯನ್ನು ಜನರು ಕೊಡಬೇಕು. ಅಧಿಕಾರಿಗಳಿಂದಲೇ ನಿತ್ಯ ಇಪ್ಪತ್ತು ರೂಪಾಯಿ ದಂಡ ಕೊಡಿಸಲಾಗುವುದು. ಈ ಸಂಬಂಧ ದೂರುಗಳನ್ನು ನೀಡಲು ಸದ್ಯದಲ್ಲೇ ವಾಟ್ಸಪ್ ಸಂದೇಶಗಳಿಗೂ ಚಾಲನೆ ನೀಡಲಾಗುವುದು ಎಂದರು.