ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯ ಲೋಪದೋಷಗಳ ಬಗ್ಗೆ ಚರ್ಚಿಸಲು ನಾಳೆ ವಿಧಾನಸೌಧದಲ್ಲಿ ಸಿಎಂ, ಸ್ಪೀಕರ್, ಪ್ರತಿಪಕ್ಷಗಳ ಮುಖಂಡರು, ಸಂಸದೀಯ ಪಟುಗಳ ಮಹತ್ವದ ಸಭೆ ನಡೆಯಲಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆ ಬೆಳಗ್ಗೆ ವಿಧಾನಸಭೆಯ ಮೊದಲನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಈ ಸಭೆ ಕರೆದಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಷೆಡ್ಯೂಲ್ನಲ್ಲಿ ಪ್ರಸ್ತಾಪಿಸಿದಂತೆ, ಪೀಠಾಸೀನ ಅಧಿಕಾರಿಗಳಿಗೆ ಲಭ್ಯವಿರುವ ಅಧಿಕಾರಗಳು ಹಾಗೂ ಈ ನಿಯಮದಡಿ ರಚಿಸಲಾದ ನಿಯಮಗಳ ಮರುಪರಿಶೀಲನೆ ಕುರಿತು ಸಭೆಯಲ್ಲಿ ಗಣ್ಯರ ಅಭಿಪ್ರಾಯ ಪಡೆಯಲಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ಹಿರಿಯ ಶಾಸಕರಾದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ ಬಿಜೆಪಿ ಪಕ್ಷದ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ಶಾಸಕರಾದ ಆರ್.ವಿ ದೇಶಪಾಂಡೆ, ಹೆಚ್.ಕೆ ಪಾಟೀಲ್, ಕೃಷ್ಣ ಭೈರೇಗೌಡ, ಮಾಜಿ ಡಿಸಿಎಂ ಡಾ. ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ.
ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ, ಹಿರಿಯ ಶಾಸಕ ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ವೆಂಕಟರಾವ್ ನಾಡಗೌಡ ಜೆಡಿಎಸ್ ಪ್ರತಿನಿಧಿಗಳಾಗಿ ಈ ಸಭೆಯಲ್ಲಿ ಹಾಜರಾಗಲಿದ್ದಾರೆ. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ವೈ ವಟವಟಿ ಈ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿರುವುದು, ಚುನಾಯಿತ ಸರ್ಕಾರವನ್ನೇ ಬದಲಿಸುವುದು ಮತ್ತು ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಶಾಸಕರುಗಳು ಮತ ಚಲಾಯಿಸಿ ಮುಜುಗರುವುಂಟು ಮಾಡುವ ನಿದರ್ಶನಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ನಿಯಮಾವಳಿ ರಚನೆಗೆ ವಿಧಾನಸಭೆ ಅಧ್ಯಕ್ಷರು ಈಗ ಮುಂದಾಗಿದ್ದಾರೆ.