ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದೆ. ಜೊತೆಗೆ ಶಾಸಕಾಂಗ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ ಎನ್ನಲಾಗಿದೆ.
ಈ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್ನಲ್ಲಿ ಬದಲಾವಣೆ ಮುನ್ಸೂಚನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಈಗಾಗಲೇ ಹೈಕಮಾಂಡ್ ಚರ್ಚೆ ಮಾಡಿದೆ. ಹಾಗಾಗಿ ಉಪಚುನಾವಣೆ ಫಲಿತಾಂಶದಲ್ಲಿ ಹಿನ್ನಡೆಯಾಗಿದ್ದು ಯಾಕೆಂದು ಹೈಕಮಾಂಡ್ಗೆ ಶಿವಕುಮಾರ್ ಮನವರಿಕೆ ಮಾಡಿಕೊಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಹೆಸರು ಕೇಳಿಬರುತ್ತಿದೆ. ಆದರೆ ಈ ಸಂದರ್ಭದಲ್ಲಿ ಅವರು ಒಪ್ಪಿಕೊಳ್ಳುವರೇ? ಎಂಬ ಪ್ರಶ್ನೆ ಎದುರಾಗಿದೆ.
ಒಟ್ಟಾರೆ ರಾಜ್ಯದ ಕಾಂಗ್ರೆಸ್ಗೆ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.