ಬೆಂಗಳೂರು : ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಪಟಾಕಿ ಅವಘಡಗಳಿಗೆ ಕಣ್ಣಿನ ಚಿಕಿತ್ಸೆ ನೀಡಲು 24 x 7 ಮಿಂಟೋ ನೇತ್ರಾಲಯ ಸಿದ್ಧವಾಗಿದೆ. ಹಬ್ಬದ ಸಮಯದಲ್ಲಿನ ಚಿಕಿತ್ಸೆಗೆ ಬೇಕಾದ ಔಷಧ ಮತ್ತು ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಎಲ್ಲಾ ರೀತಿಯ ತುರ್ತು ಚಿಕಿತ್ಸೆ ನೀಡುತ್ತಿದ್ದು, ವಿಶೇಷ ತಜ್ಞರು ಸೇರಿದ ಒಂದು ವೈದ್ಯ ತಂಡ ಸಮಯಾನುಸಾರ ಸೇವೆ ಒದಗಿಸಲು ಸಿದ್ಧವಾಗಿದೆ.
ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಕೆಳಕಂಡಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
• ಪಟಾಕಿ ಗಾಯಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಬೆಡ್ ಮೀಸಲಿಡಲಾಗಿದೆ. 10 ಪುರುಷ, 10 ಮಹಿಳಾ ಬೆಡ್ ಹಾಗೂ ಮಕ್ಕಳಿಗೆ ಪ್ರತ್ಯೇಕವಾದ 15 ಬೆಡ್ ಕಾಯ್ದಿರಿಸಲಾಗಿದೆ. ಒಟ್ಟು 35 ಬೆಡ್ ಗಳು ಮೀಸಲಿದ್ದು, ರೋಗಿಗಳಿಗೆ ಬೇಕಾದ ಚಿಕಿತ್ಸೆ ನೀಡಲು ಸಿದ್ಧವಾಗಿದೆ.
• ಗಾಯಗೊಂಡ ರೋಗಿಗಳಿಗೆ, ತಪಾಸಣೆ, ಚಿಕಿತ್ಸೆಗೆ ಸೂಕ್ತ ಸಿದ್ಧತೆ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ವಾರ್ಡಗಳನ್ನು ಸಿದ್ಧಪಡಿಸಲಾಗಿದೆ.
• ಯಾವುದೇ ತುರ್ತು ಸರ್ಜರಿ ಹಾಗೂ ಗಾಯಗೊಂಡ ರೋಗಿಗೆ ಚಿಕಿತ್ಸೆ ನೀಡಲು ಅದೇ ಬ್ಲಾಕ್ ನಲ್ಲಿಯೇ ಅಪರೇಷನ್ ಬ್ಲಾಕ್ ಕೂಡಾ ಇದ್ದು, ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
• ಕಣ್ಣಿನ ಗಾಯಗಳ ಜೊತೆಗೆ ಮುಖ ಸೇರಿದಂತೆ ದೇಹದ ಇತರೆ ಭಾಗದಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಮೀಸಲಿಡಲು ಕೇಳಿಕೊಳ್ಳಲಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜು ಜಿ. ಹೇಳಿದ್ದಾರೆ.
ತುರ್ತು ಸಹಾಯವಾಣಿ - 9481740137, 080-26707176
ಸೂಚನೆಗಳೇನು? : ಕಣ್ಣಿಗೆ ಗಾಯವಾದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ. ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಪ್ರಯತ್ನಿಸಬೇಡಿ. ಕಣ್ಣುಗಳನ್ನು ಮುಚ್ಚಿಸಿ ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ಗಾಯದ ಜಾಗವನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಅದ್ದಿಸಿ. ಆದರೆ ಐಸ್ ನೀರು ಬಳಸಬೇಡಿ, ಗಾಯದ ಸ್ಥಳ ಒಣಗಲು ಬಿಡಿ. ಶುದ್ಧವಾದ ಬಟ್ಟೆಯಿಂದ ಗಾಯವನ್ನು ಮುಚ್ಚಬೇಕು.
ಮುನ್ನೆಚ್ಚರಿಕೆ ವಹಿಸಿ: ಪಟಾಕಿ ಸಿಡಿಸುವಾಗ ಉದ್ದನೆಯ ಕಡ್ಡಿ ಬಳಸಿ. ಪಟಾಕಿ ಬಾಕ್ಸ್ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ. ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು. ಪಕ್ಕದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಸಿಂಥೆಟಿಕ್ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ. ಕಾಟನ್ ಬಟ್ಟೆ ಬಳಸಿ. ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬಾರದು. ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು ಹಾಗೂ ಪೆಟ್ರೋಲ್ ಬಂಕ್ ಬಳಿ ಪಟಾಕಿ ಸುಡಬಾರದು.
ಇದನ್ನೂ ಓದಿ : ದೀಪಾವಳಿ ಹಬ್ಬ : ಮಣ್ಣಿನ ಹಣತೆಗಳ ಖರೀದಿಯಲ್ಲಿ ನಿರತರಾದ ಸಿಲಿಕಾನ್ ಸಿಟಿ ಮಂದಿ