ಬೆಂಗಳೂರು: ಸೈಟ್ ಬೆಲೆಯಲ್ಲಿ ಸರ್ಕಾರಿ ದರಕ್ಕೂ ಮಾರುಕಟ್ಟೆ ದರಕ್ಕೂ ಕಳೆದ ಐದು ವರ್ಷಗಳಲ್ಲಿ ಶೇಕಡಾ 43ರಷ್ಟು ಇಳಿಕೆಯಾಗಿದೆ ಎಂದು ANAROCK ವರದಿ ಹೇಳಿದೆ.
ಬೆಂಗಳೂರಿನ ರಾಜಾಜಿನಗರ ಹಾಗೂ ಇಂದಿರಾನಗರದಲ್ಲಿ ಸರ್ಕಾರ ನಿಗದಿಮಾಡಿರುವ ಬೆಲೆ ಹಾಗೂ ಮಾರುಕಟ್ಟೆ ಬೆಲೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯ ಪ್ರಕಾರ 2015ರಲ್ಲಿ ರಾಜಾಜಿನಗರದಲ್ಲಿ 6500 ರೂಪಾಯಿ ಪ್ರತಿ ಚದರಡಿಗೆ ಇದ್ದ ಬೆಲೆ 2020ರಲ್ಲಿ 9012 ರೂಪಾಯಿ ಆಗಿದೆ. ವರದಿ ಹೇಳುವ ಪ್ರಕಾರ 2015 ರಲ್ಲಿ ಸರ್ಕಾರಿ ಬೆಲೆ ಹಾಗೂ ಮಾರುಕಟ್ಟೆ ಬೆಲೆಯಲ್ಲಿ ಶೇಕಡ 91 ರಷ್ಟು ಅಂತರವಿತ್ತು. ಅದೇ 2020 ರಲ್ಲಿ 48% ಇದೆ. ರಾಜಾಜಿನಗರದಲ್ಲಿ 2015ರಿಂದ 2020ರಲ್ಲಿ ಚದರಡಿಗೆ ಮಾರುಕಟ್ಟೆ ಬೆಲೆ ಕೇವಲ 7% ಏರಿಕೆಯಾಗಿದೆ.ಆದರೆ, ಇಂದಿರಾನಗರ ಬಡಾವಣೆ ಗಮನಿಸಿದರೆ ಸರ್ಕಾರಿ ನಿಗದಿತ ದರ ಏರಿಕೆಯಾಗಿದೆ. ಆದರೆ, ಮಾರುಕಟ್ಟೆ ಬೆಲೆಯಲ್ಲಿ 12% ಏರಿಕೆ ಗೊಂಡಿದೆ. ಸರ್ಕಾರಿ ಬೆಲೆಯಲ್ಲಿ 22% ಏರಿಕೆಯಾಗಿದೆ.
2020 ರ ಮೊದಲ ತ್ರೈಮಾಸಿಕದ ಮಾರುಕಟ್ಟೆ ಬೆಲೆ ರಾಜಾಜಿನಗರದಲ್ಲಿ ₹ 13,300 ಹಾಗೂ ಇಂದಿರಾನಗರದಲ್ಲಿ ₹ 11,500 ಇದೆ ಎಂದು ವರದಿ ಹೇಳಿದೆ. ಐಟಿಬಿಟಿ ಸಂಸ್ಥೆಗಳ ತಾಣವಾಗಿರುವ ಮಾರತಹಳ್ಳಿ ವೈಟ್ಫೀಲ್ಡ್ ಹಾಗೂ ಇನ್ನಿತರ ಸುತ್ತಮುತ್ತಲಿನ ಬಡಾವಣೆಗಳಿಗೆ ಇಂದಿರಾನಗರ ಸಮೀಪವಾಗಿದೆ. ಈ ಕಾರಣದಿಂದ ಇಂದಿರಾನಗರದಲ್ಲಿ ಪ್ರತಿ ಚದರ ಅಡಿಗೆ ದರ ಏರುತ್ತಿದೆ. ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ 2015ರಿಂದ 2020ರ ರಿಯಲ್ ಎಸ್ಟೇಟ್ ದರಗಳ ಏರಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ ಎಂದು ವರದಿ ತಿಳಿಸಿದೆ. ಭಾರತದ ಪ್ರತಿಷ್ಠಿತ ನಗರಗಳಾದ ಮುಂಬೈ, ಪುಣೆ, ನೊಯ್ಡಾ, ಗುರುಗ್ರಾಮ್ ಹಾಗೂ ಬೆಂಗಳೂರಿನ ಬೆಲೆಯ ಆಧಾರದ ಮೇಲೆ ಈ ಸಂಶೋಧನೆಯನ್ನು ನಡೆಸಲಾಗಿದೆ.