ಆನೇಕಲ್ (ಬೆಂಗಳೂರು): ಕೊರೊನಾ ವೈರಸ್ ಅನೇಕ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲಿ ಗಣೇಶ ಮೂರ್ತಿ ತಯಾರಕರೂ ಹೊರತಾಗಿಲ್ಲ. ಪ್ರತಿ ವರ್ಷ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮಣ್ಣಿನ ಗಣಪತಿ ಮೂರ್ತಿಗಳನ್ನು ನಿರ್ಮಾಣ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಕಲಾವಿದರ ಬದುಕು ಕೂಡ ದುಸ್ತರವಾಗಿದೆ.
ಆನೇಕಲ್ ಪಟ್ಟಣದಲ್ಲಿನ ಮುತ್ತಮ್ಮ ನಂಜುಂಡಸ್ವಾಮಿ ಕಳೆದ 45 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕೆರೆಯ ಮಣ್ಣನ್ನು ತಂದು ಹದ ಮಾಡಿ, ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಇವರು ತಯಾರಿಸುವ ಮೂರ್ತಿಗಳಿಗೆ ಪ್ರತಿವರ್ಷ ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಹೊಸಕೋಟೆಗಳಲ್ಲಿ ಭಾರಿ ಬೇಡಿಕೆ ಇರುತ್ತಿತ್ತು. ಕೊರೊನಾ ಭೀತಿಯಿಂದಾಗಿ ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೂ ಬೇಡಿಕೆಯಿಲ್ಲದಂತಾಗಿದ್ದು, ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆನೇಕಲ್, ಚಂದಾಪುರ, ಜಿಗಣಿ, ಸರ್ಜಾಪುರ, ಬನ್ನೇರುಘಟ್ಟದಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಅಷ್ಟಕ್ಕಷ್ಟೇ ಇದ್ದು, ಗ್ರಾಹಕರು ಬಾರದೇ ಇರುವುದು ಮಾರಾಟಗಾರರನ್ನು ಚಿಂತೆಗೀಡು ಮಾಡಿದೆ.