ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಒಂದೊಂದು ಕೋವಿಡ್ ಆರೈಕೆ ಕೇಂದ್ರವನ್ನು ಗುರುತಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ಗೆ ಸೂಚನೆ ನೀಡಿದ್ದಾರೆ.
ನಗರದ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಸಿ.ಎಸ್.ಆರ್ ಅನುದಾನದಡಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರ ಪರಿಶೀಲನೆಯ ನಂತರ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಸೋಂಕು ವೈರಾಣು ದಿನೇ ದಿನೆ ಏರಿಕೆಯಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಆಯಾ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕೋವಿಡ್ ಆರೈಕೆ ಕೇಂದ್ರಗಳ ಪೈಕಿ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೊಂದು ಕೋವಿಡ್ ಆರೈಕೆ ಕೇಂದ್ರವನ್ನು ಗುರುತಿಸಿ ಎಲ್ಲಾ ರೀತಿಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುತಿಸಿರುವ ಕೋವಿಡ್ ಆರೈಕೆ ಕೇಂದ್ರದ ಹೆಸರು ಮತ್ತು ವಿಳಾಸ, ಒಟ್ಟು ಹಾಸಿಗೆಗಳ ಸಂಖ್ಯೆ, ಆಕ್ಸಿಜನ್ ಬೆಡ್‌ಗಳ ಸಂಖ್ಯೆ, ಲಭ್ಯವಿರುವ ಸಿಲಿಂಡರ್‌ಗಳು/ಆಕ್ಸಿಜನ್ ಕಾನ್ಸನ್ ಟ್ರೇಟರ್ಸ್‌ಗಳ ಸಂಖ್ಯೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಕೂಡಲೇ ಸಂಗ್ರಹಿಸಿ ಮಾಹಿತಿ ನೀಡಲು ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತನೆ:
ಮಹಾಲಕ್ಷ್ಮಿ ಬಡಾವಣೆಯ ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದಲ್ಲಿ ಈ ಹಿಂದೆಯೇ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಇದೀಗ ಸಿ.ಎಸ್.ಆರ್ ಅನುದಾನದಡಿ ಆಕ್ಸಿಜನ್ ಪ್ಲಾಂಟ್, ಕಟ್ಟಡದ ಮೊದಲನೇ ಮಹಡಿಯಲ್ಲಿ 18 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ವೈದ್ಯರು, ಸಿಬ್ಬಂದಿ ಸೇರಿದಂತೆ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಿಕೊಂಡು ಸುಸಜ್ಜಿತವಾದ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಅಬಕಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯ ತಿಳಿಸಿದರು.
ಕೆಂಪೇಗೌಡ ಸಮುದಾಯ ಭವನ ಕೋವಿಡ್ ಆರೈಕೆ ಕೇಂದ್ರದಲ್ಲಿ ನೆಲಮಹಡಿಯಲ್ಲಿ 45 ಹಾಸಿಗೆ ವ್ಯವಸ್ಥೆ ಹಾಗೂ ಮೊದಲ ಮಹಡಿಯಲ್ಲಿ 18 ಆಮ್ಲಜನಕಯುಕ್ತ ಹಾಸಿಗೆ ವ್ಯವಸ್ಥೆಯಿದೆ. ಸ್ಥಳದಲ್ಲೇ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಕೂಡಾ ಇದ್ದು, ಸುಮಾರು 40 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌ಗಳಿವೆ. ಇನ್ನು ಸೋಂಕಿತ ವ್ಯಕ್ತಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಿದೆ. ಮೊದಲ ಮಹಡಿಗೆ ಲಿಫ್ಟ್ ಸೇರಿದಂತೆ ಇನ್ನಿತರೆ ಸಣ್ಣ-ಪುಟ್ಟ ಕೆಲಸಗಳಿದ್ದು, ಕೂಡಲೇ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ಡಾ.ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರು ಶಿವಸ್ವಾಮಿ, ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್, ಡಾ.ನಿರ್ಮಲಾ ಬುಗ್ಗಿ, ವಲಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.