ಬೆಂಗಳೂರು: ರಾಜ್ಯಾದ್ಯಂತ 10 ಸಾವಿರ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ ಸೆಟ್ಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕುಸುಮ್-ಬಿ ಯೋಜನೆಯಡಿ ಈ ಸೋಲಾರ್ ಪಂಪ್ ಸೆಟ್ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಈ ಯೋಜನೆಗೆ ರೈತರೇ ಅರ್ಜಿ ಹಾಕಿಕೊಳ್ಳಬೇಕು. ಪ್ರತಿ ಸೋಲಾರ್ ಪಂಪ್ಸೆಟ್ಗೆ ವೆಚ್ಚವಾಗುವ ಹಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ 30 ರಷ್ಟು ಪ್ರಮಾಣದ ಹಣ ಒದಗಿಸಲಿದ್ದು, ಫಲಾನುಭವಿ ರೈತರು ಶೇ.40 ರಷ್ಟು ಹಣ ಪಾವತಿಸಬೇಕು ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
8 ಲಕ್ಷ ಜನರಿಂದ ವಿದ್ಯುತ್ ಪಂಪ್ ಸೆಟ್ಗೆ ಅರ್ಜಿ: ರಾಜ್ಯದಲ್ಲಿ ಹೊಸದಾಗಿ ಎಂಟು ಲಕ್ಷ ಮಂದಿ ವಿದ್ಯುತ್ ಪಂಪ್ ಸೆಟ್ಗಳಿಗೆ ಅರ್ಜಿ ಹಾಕಿದ್ದಾರೆ. ಇಂತಹ ರೈತರು ಕಾಯುವ ಬದಲು ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಿಕೊಳ್ಳಬಹುದು. ಹೀಗೆ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಂಡರೆ ರೈತರಿಗೂ ಅನುಕೂಲವಾಗಲಿದೆ. ಈ ಯೋಜನೆಯಡಿ ಪ್ರಸಕ್ತ ವರ್ಷ 10 ಸಾವಿರ ಮಂದಿ ರೈತರಿಗೆ ಏಳು ಅಶ್ವಶಕ್ತಿವರೆಗಿನ ಸೋಲಾರ್ ಪಂಪ್ ಸೆಟ್ಗಳನ್ನು ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಈಗ 34 ಲಕ್ಷ ಕೃಷಿ ಪಂಪ್ ಸೆಟ್ಗಳಿದ್ದು, ಇನ್ನೂ ಎಂಟು ಲಕ್ಷ ಮಂದಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕೃಷಿ ಪಂಪ್ ಸೆಟ್, ಭಾಗ್ಯಜ್ಯೋತಿ ಯೋಜನೆ ಸೇರಿದಂತೆ ಕೆಲ ಯೋಜನೆಗಳಿಗಾಗಿ ಸರ್ಕಾರ ಹದಿನೈದು ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನದ ರೂಪದಲ್ಲಿ ನೀಡುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯ ಪ್ರಮಾಣ ಎಂಟು ಸಾವಿರ ಮೆಗಾವ್ಯಾಟ್ ನಷ್ಟಿದೆ ಎಂದು ಮಾಹಿತಿ ನೀಡಿದರು.
ವಿದ್ಯುತ್ ಮಾರಾಟ: ಈ ಹಿಂದೆ ವಿದ್ಯುತ್ ಕೊರತೆಯಾದಾಗ ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸುವ ಕೆಲಸ ನಡೆಯುತ್ತಿತ್ತು. ಆದರೆ ಈಗ ಖಾಸಗಿಯವರಿಗೆ ಮತ್ತು ಹೊರರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವ ಸುಸ್ಥಿತಿಯಲ್ಲಿದ್ದೇವೆ. ಕಳೆದ ಮೂರು ತಿಂಗಳಲ್ಲಿ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಗೆ ಮತ್ತು ಖಾಸಗಿಯವರಿಗೆ ಎರಡೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಮೌಲ್ಯದ ವಿದ್ಯುತ್ ಮಾರಾಟ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕಲ್ಲಿದ್ದಲಿನ ಕೊರತೆ ಇಲ್ಲ: ರಾಜ್ಯದ ವಿದ್ಯುತ್ ಘಟಕಗಳಿಗೆ ಸದ್ಯಕ್ಕೆ ಕಲ್ಲಿದ್ದಲಿನ ಕೊರತೆ ಇಲ್ಲ. ಈಗಾಗಲೇ ಮೂರು ಕೇಂದ್ರಗಳಿಂದ ರಾಜ್ಯಕ್ಕೆ 13 ರೇಕುಗಳಷ್ಟು ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಈ ಮಧ್ಯೆ ದೇಶದಲ್ಲಿ ಕಲ್ಲಿದ್ದಲಿನ ಒಟ್ಟಾರೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದೇಶಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಆಮದು ಕಲ್ಲಿದ್ದಲು ದೊರೆತರೆ ಅದನ್ನು ಖರೀದಿಸುವುದಾಗಿ ಸ್ಪಷ್ಟಪಡಿಸಿದರು.
ವಿದ್ಯುತ್ ರಿಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ನಿರ್ಧಾರ: ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಎಲ್ಲೆಡೆ ವಿದ್ಯುತ್ ರಿಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಜುಲೈ 1 ರಿಂದ ಆರಂಭವಾಗುವ ಇ.ವಿ. ಅಭಿಯಾನದಡಿ 1108 ವಿದ್ಯುತ್ ರಿಚಾರ್ಜ್ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ವಿದ್ಯುತ್ ವಾಹನಗಳಿಗೆ ಎಲ್ಲೆಡೆ ರೀಚಾರ್ಜಿಂಗ್ ಕೇಂದ್ರಗಳು ಲಭ್ಯವಾಗಬೇಕು ಎಂಬ ಉದ್ದೇಶ ಸರ್ಕಾರದ್ದು. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ 500 ಮೀಟರ್ ಅಂತರದಲ್ಲಿ ಒಂದು ವಿದ್ಯುತ್ ರಿಚಾರ್ಜಿಂಗ್ ಕೇಂದ್ರ ಇರಲಿದೆ ಎಂದು ಹೇಳಿದರು.
ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ಮಾಡುವುದು ಸರ್ಕಾರವಲ್ಲ, ಕೆಇಆರ್ಸಿ : ಸಚಿವ ಸುನೀಲ್ ಕುಮಾರ್
ದ್ವಿಚಕ್ರ ವಾಹನಗಳಿಗೆ ರಿಚಾರ್ಜ್ ಮಾಡುವ ಘಟಕಕ್ಕೆ 20 ರಿಂದ 30 ಸಾವಿರ ರೂಪಾಯಿ ವೆಚ್ಚ ತಗುಲಲಿದೆ. ನಾಲ್ಕು ಚಕ್ರದ ವಾಹನಗಳಿಗೆ ರಿಚಾರ್ಜ್ ಮಾಡುವ ಕೇಂದ್ರಗಳಿಗೆ 8 ರಿಂದ 9 ಲಕ್ಷ ರೂಪಾಯಿ ವೆಚ್ಚವಾಗಲಿದೆ. ದೇಶದಲ್ಲೇ ಹೆಚ್ಚು ರಿಚಾರ್ಜ್ ಕೇಂದ್ರಗಳು ಕರ್ನಾಟಕದಲ್ಲಿ ಪ್ರಾರಂಭವಾಗಲಿದ್ದು, ಇದರಿಂದ ವಿದ್ಯುತ್ ಮೋಟಾರುವಾಹನಗಳ ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಉತ್ಪಾದಿಸಲು ಮುಂದಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.