ಬೆಂಗಳೂರು: ಫೆ.14-25ರವರೆಗೆ ಜಂಟಿ ಅಧಿವೇಶನವನ್ನು ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಇಂದು ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಫೆ.14-25ರವರೆಗೆ ಜಂಟಿ ಅಧಿವೇಶನ ನಡೆಸಲು ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸಂಪುಟ ಸಭೆಯಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಪ್ರೋತ್ಸಾಹದಾಯಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ರೂ.93.27 ಕೋಟಿಗಳ ಅಂದಾಜು ವೆಚ್ಚದಲ್ಲಿ ಉಚಿತವಾಗಿ ಸಮವಸ್ತ್ರ ಬಟ್ಟೆಯನ್ನು ವಿತರಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಅದೇ ರೀತಿ ಡಾ.ಕೆ. ಶಿವರಾಂ ಕಾರಂತ ಬಡಾವಣೆಗಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ 66.17 ಎಕರೆ ಸರ್ಕಾರಿ ಜಮೀನುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಜೀವಾವಧಿ ಶಿಕ್ಷಾ ಬಂಧಿಗಳ ಬಿಡುಗಡೆ:
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 166 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದ ಸಚಿವರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮಗಳನ್ನು ಒಂದೇ ನಿಗಮವನ್ನಾಗಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಇಂತಿವೆ:
- ರಾಮನಗರ ಜಿಲ್ಲೆ, ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ರಾಮನಗರ-ಚನ್ನಪಟ್ಟಣ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯನ್ನು ನಬಾರ್ಡ್ ಸಹಯೋಗದೊಂದಿಗೆ ರೂ. 75 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ
- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾದೇಶಿಕ ನಿಧಿಯಡಿ ಕಲಬುರಗಿ ನಗರದ ಸೇಡಂ - ರಿಂಗ್ ರಸ್ತೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ 355.78 ಕಿ.ಮೀ. ರಲ್ಲಿ ಖರ್ಗೆ ಪೆಟ್ರೋಲ್ ಪಂಪ್ ಸಮೀಪದ ಫ್ಲೈ ಓವರ್ (ಹುಮ್ಮಾಬಾದ್ ಬೇಸ್-ರಾಮಮಂದಿರ ರಸ್ತೆಯ ಭಾಗ) ರೂ.49 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
- ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳ ಪರಿಷ್ಕೃತ ಅಂದಾಜು ರೂ. 92.81 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ
- ಬೆಂಗಳೂರು ಜಿಲ್ಲೆಯ ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದಲ್ಲಿ 4 ಎಕರೆ 19 ಗುಂಟೆ ಸರ್ಕಾರಿ ಜಮೀನನ್ನು ರಾಜ್ಯ ಗುಪ್ತವಾರ್ತೆ ಘಟಕದ ತರಬೇತಿ ಅಕಾಡೆಮಿಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಒಳಾಡಳಿತ ಇಲಾಖೆಗೆ ಉಚಿತವಾಗಿ ಮಂಜೂರು
- ರಾಜ್ಯದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ಹಾಗೂ ಕೃಷಿ ಭೂಮಿಯ ಹಕ್ಕು ದಾಖಲೆಗಳನ್ನು ಮತ್ತು ಪಟ್ಟಣ ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸರಿಸಿ ಅರ್ಹ ಖಾಸಗಿ ಏಜೆನ್ಸಿಗಳಿಂದ ಡೋಗ್-ಒಂದು ಸೇವೆ ಅಥವಾ ವೈಮಾನಿಕ ಸಮೀಕ್ಷೆಯನ್ನು ರೂ. 287 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
- 400 ಮಂದಿ ಗೋ ವೈದ್ಯರನ್ನು ನೇಮಕಾತಿ ಮಾಡಲು ಅನುಮತಿ
- ವರ್ತೂರು ಎಲೆವೇಟೆಡ್ ಕಾರಿಡಾರ್ನ್ನು 1.3 ಕಿ.ಮೀ. ರಿಂದ 1.99 ಕಿ.ಮೀಗೆ ವಿಸ್ತರಿಸಿ, 488 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
- ತಾಂಡಾ ಅಭಿವೃದ್ಧಿ ನಿಗಮ ರಾಯಚೂರು ತಾಲೂಕು ಸಿದ್ದರಾಂಪೂರ ಗ್ರಾಮದ ಸರ್ವೆ ನಂ. 105/*/3ರಲ್ಲಿ ಬಂಜಾರ ಭವನ ನಿರ್ಮಾಣಕ್ಕಾಗಿ ಉಪಯೋಗಿಸಿಕೊಂಡಿರುವ ಖಾಸಗಿ ಜಮೀನಿಗೆ ಬದಲಾಗಿ ಅದೇ ಗ್ರಾಮದ ಸರ್ವೆ ನಂ. 106ರಲ್ಲಿನ ಸರ್ಕಾರಿ ಜಮೀನನ್ನು ರಾಜೇಶ್ ಪಿ. ಪಾಟೀಲ್ ಎಂಬುವವರಿಗೆ ನೀಡಲು ಮಂಜೂರು
- ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಸ್ತುತ ಚಾಲನೆಯಲ್ಲಿರುವ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯ 32 ಗ್ರಾಮಗಳಿಗೆ ವಿಸ್ತರಿಸುವ 22 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
- ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ ಬಾಕಿ ಇರುವ 300 ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ 392.08 ಕೋಟಿಗಳ ಅಂದಾಜು ಆಡಳಿತಾತ್ಮಕ ಅನುಮೋದನೆ
- ಕೇಂದ್ರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ (ಅಮೃತ್) ರಾಜ್ಯ ಮಟ್ಟದ ಉನ್ನತ ಮಟ್ಟದ ಸಂಚಾಲನಾ ಸಮಿತಿ (SHPSC)ಯನ್ನು ಪುನರ್ ರಚಿಲು ನಿರ್ಧಾರ
- ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಮಂಗಳೂರು ತಾಲ್ಲೂಕು, ಚೇಳ್ಯಾರು, ಪದವು ಮತ್ತು ಮಧ್ಯ ಗ್ರಾಮಗಳಲ್ಲಿ ಪ್ರಾಧಿಕಾರದ ವತಿಯಿಂದ 45.85 ಎಕರೆ ಭೂಮಿಯಲ್ಲಿ ಉದ್ದೇಶಿಸಿರುವ ವಸತಿ ಬಡಾವಣೆ ಯೋಜನೆಯ 30.50 ಕೋಟಿ ರೂ.ನ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಮರಗೋಳ ಗ್ರಾಮದ ಬ್ಲಾಕ್ ನಂ.89ರಲ್ಲಿ ಸ್ಥಾಪಿಸಲಾದ ಆರ್ಯಭಟ ಐಟಿ ಪಾರ್ಕಿನಲ್ಲಿ ಬಾಕಿ ಉಳಿದ 3 ಎಕರೆ ಜಮೀನನ್ನು 3 ಐಟಿ/ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡಲು ಅನುಮೋದನೆ
- ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಭೀಮಾ ನದಿ ಪಾತ್ರದಿಂದ 20 ಕೆರೆಗಳಿಗೆ ನೀರು ತುಂಬಿಸುವ 165 ಕೋಟಿ ರೂ. ಅಂದಾಜು ಮೊತ್ತದ ಯೋಜನೆಯನ್ನು ವಿಶೇಷಯೋಜನೆಯಡಿ ಕೈಗೆತ್ತಿಕೊಳ್ಳುವ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಯಡೂರು ರಸ್ತೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್-ಕಂ-ಬ್ಯಾರೇಜ್ ಮರು ನಿರ್ಮಾಣ ಕಾಮಗಾರಿಯ 35 ಕೋಟಿ ರೂ.ನ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
ಸಂಪುಟ ಸಭೆ ಬಳಿಕ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾಧ್ಯಮಗೋಷ್ಟಿ: ನೇರಪ್ರಸಾರ
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 166 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ